ಅಹ್ಮದಾಬಾದ್, ಫೆ 18 (Daijiworld News/MB) : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ. 24ರಂದು ಪ್ರಧಾನಿ ನರೇಂದ್ರ ಮೋದಿಯಿಂದಿಗೆ ಭಾಗಿಯಾಗಲಿರುವ "ನಮಸ್ತೇ ಟ್ರಂಪ್" ಕಾರ್ಯಕ್ರಮ ನಡೆಯಲಿರುವ ಮೊಟೇರಾ ಸ್ಟೇಡಿಯಂ ಪಕ್ಕದ ಕೊಳಗೇರಿಯಲ್ಲಿ ವಾಸವಾಗಿರುವ 45 ಕುಟುಂಬಗಳಿಗೆ ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಸೋಮವಾರ ತೆರವು ನೋಟಿಸ್ ಜಾರಿಗೊಳಿಸಿದೆ.
ಈ ಬಗ್ಗೆ ಅಳಲು ತೋಡಿಕೊಂಡಿರುವ ಸ್ಲಂ ನಿವಾಸಿಗಳು "ನಮಸ್ತೇ ಟ್ರಂಪ್ ಕಾರ್ಯಕ್ರಮಕ್ಕಾಗಿ ನಾವು 2 ದಶಕಗಳಿಂದ ವಾಸವಾಗಿರುವ ಜಾಗವನ್ನು ತೆರವು ಮಾಡಲು ಹೇಳಿದ್ದಾರೆ" ಎಂದಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿಸಿಪಲ್ ಅಧಿಕಾರಿಗಳು "ನಾವು ನೀಡಿರುವ ನೋಟಿಸ್ಗೂ ಟ್ರಂಪ್ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳುತ್ತಿದ್ದಾರೆ.
ಟ್ರಂಪ್ ಹಾದುಹೋಗುವ ರಸ್ತೆಯ ಬದಿಯಲ್ಲಿರುವ ಕೊಳಗೇರಿಗೆ ಮರೆಮಾಚಲು ಅದಕ್ಕೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡಲು ಆರಂಭಿಸಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ 45 ಕುಟುಂಬದಲ್ಲಿ ಸುಮಾರು 200 ಸದಸ್ಯರಿದ್ದು ಎಲ್ಲರೂ ಮಜೂರ್ ಅಧಿಕಾರ್ ಮಂಚ್ನಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರಾಗಿದ್ದಾರೆ. ಅವರ ಗುಡಿಸಲುಗಳು ಸ್ಟೇಡಿಯಂನಿಂದ ಸುಮಾರು 1.5 ಕಿ.ಮೀ.ದೂರದಲ್ಲಿ ಸ್ಟೇಡಿಯಂ ಹಾಗೂ ವಿಸತ್ ಗಾಂಧಿನಗರ ಹೆದ್ದಾರಿಗೂ ಸಂಪರ್ಕಿಸುವ ರಸ್ತೆ ಬದಿಯಲ್ಲಿದೆ.
ಈ ಗುಡಿಸಲು ಇರುವ ಭೂಮಿ ಮುನಿಸಿಪಲ್ ಕಾರ್ಪೋರೇಶನ್ಗೆ ಸೇರಿದ್ದು ಹಾಗೂ ನಗರ ಯೋಜನೆಯ ಭಾಗವಾಗಿದೆ.
ಏಳು ದಿನದ ಒಳಗಾಗಿ ಈ ಸ್ಥಳವನ್ನು ತೆರವು ಮಾಡಬೇಕು. ಈ ಕುರಿತು ಏನಾದರೂ ಮನವಿ ನೀಡಲಿದ್ದರೆ ಬುಧವಾರದ ಒಳಗಾಗಿ ಮಾಡಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ.
ಹಾಗೆಯೇ ಈ ನೋಟಿಸಿನಲ್ಲಿ ಫೆ.11 ಎಂದು ನಮೂದಿಸಲಾಗಿದ್ದು ಅದನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ನಿವಾಸಿಗಳು ಇಂದಿನೊಳಗೆ ಸ್ಥಳ ತೆರವು ಮಾಡಬೇಕಾಗಿದೆ.
ಈ ಬಗ್ಗೆ ಮಾತನಾಡಿದ ಸಹಾಯಕ ನಗರಾಭಿವೃದ್ಧಿ ಅಧಿಕಾರಿ ಕಿಶೋರ್, "ಇಲ್ಲಿನ ನಿವಾಸಿಗಳು ನಗರ ಯೋಜನೆಯ ಭಾಗವಾಗಿರುವ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಆದ್ದರಿಂದ ಇವರಿಗೆ ನೋಟಿಸ್ ನೀಡಲಾಗಿದೆ" ಎಂದು ಹೇಳಿದ್ದಾರೆ.