ಬೆಂಗಳೂರು, ಫೆ 18 (Daijiworld News/MB) : "ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ಮಾಡಲೆಂದು ಪಕ್ಷದ ಕೆಲವು ಶಾಸಕರು ಮನೆಗೆ ಭೇಟಿ ನೀಡಿದ್ದರು. ಆದರೆ ಈ ಕುರಿತಂತೆ ಮಾಧ್ಯಮಗಳಲ್ಲಿ ಊಹಾಪೋಹದ ಸುದ್ದಿಗಳು ಪ್ರಸಾರವಾಗುತ್ತಿದೆ" ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ವರದಿಗಾರೊಂದಿಗೆ ಮಾತನಾಡಿದ ಅವರು, "ನಾನು ಈಗ ಸಚಿವನಾಗಿದ್ದೇನೆ ಆ ನಿಟ್ಟಿನಲ್ಲಿ ಶಾಸಕರು ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬಂದಿದ್ದಾರೆ. ಈ ಹಿಂದೆ ಕೂಡಾ ಹಲವಾರು ಬಾರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡಸಲು ಮನೆಗ ಭೇಟಿ ನೀಡಿದ್ದಾರೆ. ಆದರೆ ಇದೀಗ ಈ ರೀತಿಯಾಗಿ ಗೊಂದಲ ಸೃಷ್ಟಿ ಮಾಡುವ ಕಾರ್ಯಗಳು ನಡೆಯುತ್ತಿದೆ" ಎಂದು ಅವರು ಆರೋಪಿಸಿದರು.
ಸಚಿವ ಸ್ಥಾನ ಲಭಿಸದ ಕೆಲವು ಅತೃಪ್ತ ಶಾಸಕರು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನಿವಾಸದಲ್ಲಿ ಸೋಮವಾರ ರಾತ್ರಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಸಕ್ತ ಪಕ್ಷದ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗಿದ್ದು, ಸಚಿವ ಸ್ಥಾನ ನೀಡುವಾಗ ಪ್ರದೇಶ, ಜಾತಿ ಮತ್ತು ಹಿರಿತನಕ್ಕೆ ಮನ್ನಣೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ಮಾಹಿತಿ ನೀಡಿದ್ದವು.
ಹಾಗೆಯೇ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿ ಬಂದಿದೆ. ಆಡಳಿತದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು.
ಮೂಲಗಳ ಪ್ರಕಾರ ಸಭೆಯಲ್ಲಿ ಶಾಸಕರಾದ ಉಮೇಶ ಕತ್ತಿ, ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ, ಶಿವನಗೌಡ ನಾಯಕ್, ರಾಜೂಗೌಡ, ಶಂಕರ ಮುನೇನಕೊಪ್ಪ, ಎ.ಎಸ್.ಪಾಟೀಲ ನಡಹಳ್ಳಿ, ರುದ್ರಪ್ಪ ಲಮಾಣಿ ಮತ್ತು ಇತರರು ಇದ್ದರು. ಕ್ರೆಸೆಂಟ್ ರಸ್ತೆಯಲ್ಲಿರುವ ಮನೆಯಲ್ಲಿ ಭೋಜನ ಕೂಟದ ನೆಪದಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಲಾಗಿದೆ.