ಅಯೋಧ್ಯೆ, ಫೆ 18 (Daijiworld News/MB) : ಧ್ವಂಸಗೊಂಡ ಬಾಬರಿ ಮಸೀದಿಯ ಬಳಿ ಇರುವ 4- 5 ಎಕರೆ ಜಮೀನಿನಲ್ಲಿ ಮುಸ್ಲಿಮರ ಗೋರಿ ಇದೆ. ಆ ಜಮೀನನ್ನು ಶ್ರೀರಾಮನ ಮೇಲಿನ ಗೌರವ ಮತ್ತು ಮಾನವೀಯತೆಯ ದೃಷ್ಟಿಯಿಂದ ಬಳಸಬೇಡಿ. ಬಾಬರಿ ಮಸೀದಿಯ ಸುತ್ತಲಿರುವ ಸ್ಮಶಾನದ ಜಮೀನನ್ನು ಸನಾತನ ಧರ್ಮದ ಸಲುವಾಗಿ ಬಿಟ್ಟುಬಿಡಬೇಕು ಎಂದು ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಎಂಆರ್ ಶಮ್ಶಾದ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಪತ್ರ ಬರೆದಿದ್ದಾರೆ.
ಮುಸ್ಲಿಮರ ಪ್ರಕಾರ ಅಲ್ಲಿರುವ ಸ್ಮಶಾನವು ಗಂಜ್ ಶಹಿದಾನ್ ಎಂದು ಕರೆಯಲ್ಪಡುತ್ತದೆ. 1885ರಲ್ಲಿ ಅಯೋಧ್ಯೆಯಲ್ಲಿ ನಡೆದ ಗಲಭೆಯಲ್ಲಿ ಪ್ರಾಣ ಕಳೆದುಕೊಂಡ 75 ಮುಸ್ಲಿಮರನ್ನು ಇಲ್ಲಿ ದಫನ ಮಾಡಲಾಗಿದೆ. ಫೈಜಾಬಾದ್ ಗಜೆಟಿಯರ್ನಲ್ಲಿಯೂ ಇದರ ಉಲ್ಲೇಖವಿದೆ ಎಂದು ಹೇಳಿದ್ದಾರೆ.
ಸ್ಮಶಾನದ ಜಮೀನನ್ನು ಕೇಂದ್ರ ಸರ್ಕಾರವು ಪರಿಗಣಿಸದೆ ಶ್ರೀರಾಮನಿಗೆ ಬೃಹತ್ ದೇವಾಲಯ ನಿರ್ಮಿಸಲು ಆದೇಶಿಸಿದೆ. ಇದು ಧರ್ಮ ಉಲ್ಲಂಘನೆ. ಸನಾತನ ಧರ್ಮದ ಪ್ರಕಾರವಾಗಿ ಮುಸ್ಲಿಮರ ಗೋರಿ ಮೇಲೆ ಶ್ರೀರಾಮನ ದೇವಾಲಯದ ಅಡಿಪಾಯ ಇರಲು ಸಾಧ್ಯವೇ? ಈ ನಿರ್ಧಾರವನ್ನು ಟ್ರಸ್ಟ್ನ ವ್ಯವಸ್ಥಾಪಕರು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ.