ಬೀದರ್, ಫೆ 18 (Daijiworld News/MB) : ಭಾರತಕ್ಕಿಂತ ಹೆಚ್ಚು ಪಾಕಿಸ್ತಾನದ ಮೇಲೆ ಕಾಂಗ್ರೆಸ್ ನಾಯಕರಿಗೆ ಪ್ರೀತಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಪಟ್ಟಿದ್ದಾರೆ.
ಮಾಧ್ಯಮದೊಂದಿಗೆ ಬೀದರ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರು ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಹಾಗೂ ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಧಾನಿ ವಿರುದ್ದ ಅವಹೇಳನ ನಾಟಕ ಪ್ರದರ್ಶನದ ಕುರಿತು ಪ್ರಕರಣ ದಾಖಲಿಸಲಾಗಿದೆ ಅದಕ್ಕಾಗಿ ಕೈ ನಾಯಕರು ಅವರ ಬೆನ್ನಿಗೆ ನಿಂತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ನಾಯಕರಿಗೆ ಪಾಕಿಸ್ಥಾನದ ಮೇಲೆ ಹೆಚ್ಚು ಪ್ರೀತಿ ಇದ್ದ ಹಾಗೇ ಕಾಣುತ್ತದೆ" ಎಂದರು.
"ಪ್ರತಿಯೊಬ್ಬ ಭಾರತೀಯ ನಾಗರಿಕ ಭಾರತ ಮಾತೆಗೆ ಜೈ ಎನ್ನಬೇಕೆ ಹೊರತು ಪಾಕಿಸ್ತಾಕ್ಕೆ ಜೈ ಅನ್ನಬಾರದು, ಹಾಗೆ ಮಾಡಿದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲಾ. ಹಾಗೆ ಕೇಳಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳುವವರು ನಾವಲ್ಲ" ಎಂದು ಅವರು ಹೇಳಿದರು.
"ಅಧಿವೇಶನದಲ್ಲಿ ವಿಪಕ್ಷಗಳು ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಿ. ಅದಕ್ಕೆ ನಾವು ಚರ್ಚೆ ಮಾಡಲು ತಯಾರಾಗಿದ್ದೇವೆ. ಅದನ್ನು ಬಿಟ್ಟು ಅಧಿವೇಶನ ಬಹುಷ್ಕಾರ ಮಾಡುವುದು ಅವರಿಗೆ ಶೋಭೆ ತರುವಂತದಲ್ಲ. ಹಲವಾರು ಜ್ವಲಂತ ಸಮಸ್ಯೆಗಳು ಇದೆ ಅದರ ಬಗ್ಗೆ ಅವರು ಚರ್ಚೆ ಮಾಡಲಿ" ಎಂದು ಶ್ರೀರಾಮುಲು ಹೇಳಿದರು.