ಬೆಂಗಳೂರು, ಫೆ 19 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್ನಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರದ ವಿಧಾನ ಸಭೆಯಲ್ಲಿ ಕೇಳಿಬಂದಿದೆ. ಮಂಗಳೂರು ಗಲಭೆಯ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಅವರು ಮಂಗಳೂರಿನಲ್ಲಿ ಗಲಭೆ ನಡೆಯಲು ಪೊಲೀಸರೇ ಕಾರಣವಾಗಿದ್ದು, ಬಿಜೆಪಿ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಎಲ್ಲೆಡೆಯು 144 ಸೆಕ್ಷನ್ ಹಾಕುವ ಅಗತ್ಯವಿರಲಿಲ್ಲ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು.
ಆದರೆ ಪೊಲೀಸರು 144 ಸೆಕ್ಷನ್ ಹಾಕಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ರಾಜ್ಯದ ಹಲವೆಡೆ ಶಾಂತಿಯುತ ಪ್ರತಿಭಟನೆ ನಡೆದಿದೆ. ಅದರಂತೆ ಮಂಗಳೂರಿನಲ್ಲೂ ಅವಕಾಶ ನೀಡಬೇಕಾಗಿತ್ತು. ಅವಕಾಶ ನೀಡುತ್ತಿದ್ದರೆ ಗಲಭೆ ಆಗುತ್ತಿರಲಿಲ್ಲ ಎಂದು ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಲ್ಲಿ ಜಲೀಲ್ ಮತ್ತು ನೌಶೀನ್ ಸಾವನ್ನಪ್ಪಿದ್ದರು.