ನವದೆಹಲಿ, ಫೆ 19 (Daijiworld News/MB) : ಚೀನಾದಲ್ಲಿ ಕೊರೋನಾ ವೈರಸ್ ಹಾವಳಿಯಿಂದಾಗಿ ಭಾರತ ದೇಶದ ಅರ್ಥವ್ಯವಸ್ಥೆಯ ಕೆಲವು ವಿಭಾಗಗಳ ಮೇಲೆ ಸ್ವಲ್ಪ ಪ್ರತಿಕೂಲ ಪರಿಣಾಮ ಬೀರಲಿದೆ. ಇದಲ್ಲದೆ, ಆಮದು-ರಫ್ತು ಕ್ಷೇತ್ರ ವಿಶೇಷವಾಗಿ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಕರಿ ಛಾಯೆ ಬೀಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳ ಜತೆಗೆ ವೈರಸ್ ಹಾವಳಿಯಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ಬುಧವಾರ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜತೆಗೆ ಸಭೆ ನಡೆಸುವುದಾಗಿ ಹೇಳಿದ ಸೀತಾರಾಮನ್, ಪ್ರಧಾನಿ ಕಚೇರಿಯಿಂದ ಸಲಹೆ ಪಡೆದ ನಂತರ ಕೆಲವೊಂದು ಪರಿಹಾರಾತ್ಮಕ ಕ್ರಮಗಳನ್ನು ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
ಕೊರೋನಾ ಹಾವಳಿಯಿಂದಾಗಿ ದೇಶದಲ್ಲಿ ಬೆಲೆ ಏರಿಕೆ ಉಂಟಾಗುವುದರ ಬಗ್ಗೆ ಆತಂಕ ಇಲ್ಲ. ಮೇಕ್ ಇನ್ ಇಂಡಿಯಾ ಮೇಲೆ ಅದರ ಪ್ರಭಾವವನ್ನು ಈಗಲೇ ಊಹಿಸಲಾಗದು. ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾಗಿರುವ ವಸ್ತುಗಳು- ಔಷಧ, ವೈದ್ಯಕೀಯ ಸಲಕರಣೆಗಳ ಕೊರತೆ ಉಂಟಾಗಿರುವ ಬಗ್ಗೆ ಸರಕಾರಕ್ಕೆ ಇದು ವರೆಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.