ಹಾಸನ, ಫೆ 19 (Daijiworld News/MB) : ಮಾಜಿ ಪ್ರಧಾನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜನ್ನು ಬಿಜೆಪಿ ಸರ್ಕಾರ ಸುಖಾಸುಮ್ಮನೆ ಕಾರಣ ನೀಡಿ ಕಾಲೇಜನ್ನು ಮುಚ್ಚಲು ಮುಂದಾಗಿದ್ದಾರೆ. ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ಕುರಿತಾಗಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, "ಹಾಸನ ಎಂದಾಗ ನೆನಪಿಗೆ ಬರುವುದು ಏಕಮಾತ್ರ ಕನ್ನಡಿಗ ಪ್ರಧಾನಿಯಾಗಿದ್ದ ದೇವೇಗೌಡರು. ಅಂತಹ ಪ್ರಧಾನಿ ಓದಿದ್ದ ಹಾಸನದ ಡಿಪ್ಲೊಮಾ ಕಾಲೇಜ್ ಈಗ ಮುಚ್ಚಲಾಗುತ್ತಿದೆ. ಈ ಕಾಲೇಜು ಹಾಸನ ವೃತ್ತದಲ್ಲಿರುವ ಸುಮಾರು 50 ಎಕರೆ ಪ್ರದೇಶದಲ್ಲಿದ್ದು ಈ ಕಾಲೇಜನ್ನು 1948ರಲ್ಲಿ ನಿರ್ಮಿಸಲಾಗಿತ್ತು. ಆದರೆ ಈಗ ಮೂಲಭೂತ ಸೌಕರ್ಯ ಇಲ್ಲ ಎಂದು ಬಿಜೆಪಿ ಸರ್ಕಾರ ಕಾಲೇಜನ್ನೇ ಮುಚ್ಚುತ್ತಿದೆ. ಇದು ದ್ವೇಷ ರಾಜಕಾರಣ" ಎಂದು ಆರೋಪಿಸಿದ್ದಾರೆ.
"ಈ ಕಾಲೇಜನ್ನು 1948ರಲ್ಲಿ ನಿರ್ಮಾಣ ಮಾಡಿದಾಗ ನಾಲ್ಕೈದು ಜಿಲ್ಲೆಗಳಿಗೆ ಇದು ಒಂದೇ ಡಿಪ್ಲೊಮಾ ಕಾಲೇಜಾಗಿತ್ತು. ದೇವೇಗೌಡರು 1951 ರಿಂದ 53ರವರೆಗೆ ಮೂರು ವರ್ಷ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು. ಕಾಲೇಜು ಮುಚ್ಚಬೇಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ರಾಜ್ಯ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆ ನಿಟ್ಟಿನಲ್ಲಿ ಕಾಲೇಜು ಮುಚ್ಚಿದರೆ ಹೋರಾಟ ಮಾಡಲಾಗುತ್ತದೆ" ಎಂದು ಜೆಡಿಎಸ್ನ ಸ್ಥಳೀಯ ನಾಯಕರು ಎಚ್ಚರಿಸಿದ್ದಾರೆ.
"ಹಾಗೆಯೇ ಶಾಲಾ- ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಗುಣಮಟ್ಟ ಸುಧಾರಿಸಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಬೆಳಕಾಗಬೇಕಿರೋ ಸರ್ಕಾರವೇ ಈಗ ಕಾಲೇಜು ಮುಚ್ಚಲು ಮುಂದಾದರೆ ಎಷ್ಟು ಸರಿ" ಎಂದು ಟೀಕೆ ಮಾಡಿದ್ದಾರೆ.