ಬೆಂಗಳೂರು, ಫೆ 19 (Daijiworld News/MB) : "ಮಂಗಳೂರಿನಲ್ಲಿ ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ನಲ್ಲಿ ಮೃತಪಟ್ಟವರು ಭಯೋತ್ಪಾದಕರು, ಅವರ ಮನೆಗೆ ಸಚಿವರು ಭೇಟಿ ನೀಡುವ ಅಗತ್ಯವಿಲ್ಲ" ಎಂದು ಆಡಳಿತ ಪಕ್ಷದ ಎನ್. ರವಿಕುಮಾರ್ ಅವರು ಹೇಳಿದ್ದು ಈ ಹೇಳಿಕೆಗೆ ಮಂಗಳವಾರ ವಿಧಾನ ಪರಿಷತ್ನಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರು ನಿಲುವಳಿ ಸೂಚನೆಯ ಮೇರೆಗೆ ವಿಷಯ ಪ್ರಸ್ತಾಪಿಸಿ, ಬಿಜೆಪಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿದರು.
"ನನಗೆ ಮಂಗಳೂರಿಗೆ ತೆರಳಲು ಅವಕಾಶ ನೀಡಿಲ್ಲ, ಸಂತ್ರಸ್ಥರಿಗೆ ಪರಿಹಾರವೂ ನೀಡಿಲ್ಲ" ಎಂದು ಹೇಳುತ್ತಿದ್ದ ವೇಳೆ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ನ ಐವನ್ ಡಿಸೋಜ ಅವರು "ಜಿಲ್ಲಾ ಉಸ್ತುವಾರಿ ಸಚಿವರೇ ಸಂತ್ರಸ್ತರ ಮನೆಗೆ ಹೋಗಿಲ್ಲ" ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್ "ಭಯೋತ್ಪಾದಕರ ಮನೆಗೆ ಸಚಿವರು ಯಾಕೆ ಹೋಗಬೇಕು" ಎಂದು ಪ್ರಶ್ನಿಸಿದರು.
ರವಿಕುಮಾರ್ ಹೇಳಿಕೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ನ ಸಿ.ಎಂ.ಇಬ್ರಾಹಿಂ ಅವರು ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು. ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕೂಡಾ ಹಿಂಬಾಳಿಸಿದರು. ಈ ಹಿನ್ನಲೆಯಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಸದನವನ್ನು ಅರ್ಧ ಗಂಟೆ ಮುಂದೂಡಿದರು.
ಮತ್ತೆ ಕಲಾಪ ಆರಂಭವಾದಾಗ ರವಿಕುಮಾರ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರು. ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಅವರು ನಿಲುವಳಿ ಗೊತ್ತುವಳಿ ಮೇಲೆ ಚರ್ಚೆ ಮುಂದುವರಿಸಿದರು. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಅವರು ಧರಣಿಗೆ ಮುಂದಾಗಿದ್ದರಿಂದ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.