ಅಹ್ಮದಾಬಾದ್, ಫೆ 19 (Daijiworld News/MB) : ಹಾಂಕಾಂಗ್ ಧ್ವಜವಿದ್ದ ಹಡಗು ಗುಜರಾತ್ನ ಕಾಂಡ್ಲಾ ಬಂದರಿಗೆ ಆಗಮಿಸಿದ್ದು ಇದರಲ್ಲಿದ್ದ ಕ್ಷಿಪಣಿ ಉಡಾವಣೆಗೆ ಬಳಸುವ ಸಾಮಾಗ್ರಿಗಳನ್ನು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಹಡಗು ಚೀನಾದಿಂದ ಪಾಕಿಸ್ತಾನದ ಕರಾಚಿಯ ಖಾಸಿಂ ಬಂದರಿಗೆ ತೆರಳುತ್ತಿತ್ತು ಎಂದು ಹೇಳಲಾಗುತ್ತಿದ್ದು ಪಾಕಿಸ್ತಾನಕ್ಕೆ ಕ್ಷಿಪಣಿ ಸಾಮಾಗ್ರಿ ಸಾಗಾಟ ಮಾಡಲಾಗುತ್ತಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಹಡಗಿಗೆ ಹೆಚ್ಚುವರಿ ಸರಕನ್ನು ಲೋಡ್ ಮಾಡಲು ಅಥವಾ ಹಡಗಿನಲ್ಲಿದ್ದ ಸರಕನ್ನು ಇಳಿಸುವ ಉದ್ದೇಶದಿಂದ ಫೆ.3ರಂದು ಹಡಗನ್ನು ಕಾಂಡ್ಲಾ ಬಂದರಿಗೆ ತರಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಹಡಗಿನಲ್ಲಿ ಒಟ್ಟು 22 ಸಿಬ್ಬಂದಿಗಳು ಇದ್ದು ಹಡಗಿನಲ್ಲಿದ್ದ ಸರಕು ಸಾಮಾಗ್ರಿಗಳ ಬಗ್ಗೆ ಕಸ್ಟಮ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಹಡಗನ್ನು ವಶಕ್ಕೆ ಪಡೆದು ಶೋಧ ನಡಸಲಾಗಿದೆ.
ಈ ಸಂದರ್ಭದಲ್ಲಿ ಕ್ಷಿಪಣಿ ಉತ್ಪಾದನೆ ಹಾಗೂ ಉಡಾವಣೆಗೆ ಬಳಕೆ ಮಾಡಲಾಗುವ ಕೆಲವು ಸಾಮಾಗ್ರಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಾ ಕುಯಿಯುನ್ ಎಂಬ ಹೆಸರಿನ ಹಡಗು ಜ 17 ರಂದು ಚೀನಾದ ಜಿಯಾಂಗಿನ್ ಬಂದರಿನಿಂದ ಪ್ರಯಾಸ ಆರಂಭ ಮಾಡಿತ್ತು. ಹಡಗಿನಲ್ಲಿ ಅನುಮಾನಾಸ್ಪದವಾದ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಭಾರತದ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಕಾಂಡ್ಲಾ ಬಂದರಿನಲ್ಲಿ ಶೋಧ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.