ಬೆಂಗಳೂರು, ಫೆ 19 (Daijiworld News/MB) : "ಪೊಲೀಸರು ತಮ್ಮನ್ನು ತಾವು ರಕ್ಷಿಸಲು ಮಂಗಳೂರು ಗೋಲಿಬಾರ್ನಲ್ಲಿ ಬಲಿಯಾದವರನ್ನು ಆರೋಪಿಗಳು ಎಂದು ಹೇಳುತ್ತಿದ್ದಾರೆ" ಎಂದು ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳವಾರ ಪರಿಷತ್ತಿನಲ್ಲಿ ಮಾತನಾಡಿದ ಅವರು, "ಮಂಗಳೂರು ಗೋಲಿಬಾರ್ನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಆದರೆ ಪೊಲೀಸರು ಪಾರಾಗಲು ಈ ಬಲಿಯಾದವರು ಆರೋಪಿಗಳು ಎಂದು ಪಟ್ಟ ಕಟ್ಟಲು ಮುಂದಾಗಿದ್ದರು. ಇದು ಅತ್ಯಂತ ಅಮಾನವೀಯ ಕೆಲಸ" ಎಂದರು.
"ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ, ಸಂಸದ ಎಲ್ಲರೂ ಬಿಜೆಪಿಯವರೇ ಆಗಿದ್ದಾರೆ. ಆದರೆ ಅವರಿಗೆ ಗೋಲಿಬಾರ್ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಲು ಈವರೆಗೂ ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ಮೃತರ ಕುಟುಂಬಕ್ಕೆ ಪರಿಹಾರ ಹಣದ ಚೆಕ್ ನೀಡುತ್ತೇವೆ ಎಂದು ಕರೆಸಿಕೊಂಡು ಅಮಾನವೀಯವಾಗಿ ವರ್ತಿಸಿದ್ದಾರೆ" ಎಂದು ಅವರು ಆರೋಪಿಸಿದರು.
"ನೆರೆ ರಾಜ್ಯ ಕೇರಳದಿಂದ ಬಂದವರು ಮಂಗಳೂರು ಗೋಲಿಬಾರ್ಗೆ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಈವರೆಗೂ ಕೇರಳದ ಯಾರನ್ನೂ ಬಂಧನ ಮಾಡಿಲ್ಲ. ಸಿಎಎ, ಎನ್ಆರ್ಸಿ ವಿರುದ್ಧವಾಗಿ ಮಾತನಾಡುವ ಎಲ್ಲರನ್ನೂ ದೇಶದ್ರೋಹಿಗಳು ಎಂದು ಹೇಳುವುದು ಸರಿಯಲ್ಲ" ಎಂದು ಹೇಳಿದರು.