ಮುಂಬೈ, ಫೆ.19 (DaijiworldNews/PY): ಮುಂಬೈ ದಾಳಿಗೆ ಹಿಂದೂ ಉಗ್ರರೇ ಕಾರಣವೆಂದು ಬಿಂಬಿಸಲಾಗುತ್ತಿತ್ತು ಎಂದು ಮುಂಬಯಿ ಮಹಾನಗರದ ನಿವೃತ್ತ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದ್ದಾರೆ.
1993ರ ಸರಣಿ ಸ್ಫೋಟ, ಮುಂಬೈ ದಾಳಿ, ಶೀನಾ ಬೋರಾ ಸಹಿತ ಪ್ರಮುಖ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿಕೊಂಡಿದ್ದ ರಾಕೇಶ್ ಮರಿಯಾ ಅವರು, ಈಗ ಲೆಟ್ ಮಿ ಸೇ ಇಟ್ ನೌ ಎಂಬ ಪುಸ್ತಕ ಬರೆದಿದ್ದು, ಒಂದು ವೇಳೆ ಈ ದಾಳಿ ಸಂದರ್ಭ ಅಜ್ಮಲ್ ಕಸಬ್ ಏನಾದರೂ ಜೀವಂತವಾಗಿ ಸಿಗದಿದ್ದರೆ, ಮುಂಬೈ ದಾಳಿಗೆ ಹಿಂದೂ ಉಗ್ರರೇ ಕಾರಣ ಎಂದು ಬಿಂಬಿಸಲಾಗುತ್ತಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮುಂಬೈ ದಾಳಿಗೂ ಬೆಂಗಳೂರಿಗೂ ನಂಟು ಹಾಕಲು ಐಎಸ್ಐ ಹಾಗೂ ಲಷ್ಕರ್ ಸಂಘಟನೆಗಳು ಸಂಚು ನಡೆಸಿದ್ದವು. ಹಾಗಾಗಿ ಭಾರತದೊಳಗೆ ನುಸುಳಿದ್ದ ಉಗ್ರರು ನಕಲಿ ವಿಳಾಸ ಇರಿಸಿಕೊಂಡು ಬಂದಿದ್ದು, ಅದರಲ್ಲಿ ಅಜ್ಮಲ್ ಕಸಬ್ ವಿಳಾಸ ಬೆಂಗಳೂರಿನದ್ದಾಗಿತ್ತು. ಸಮೀರ್ ದಿನೇಶ್ ಚೌಧರಿ, ಅರುಣೋದಯ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು, ಬೆಂಗಳೂರಿನ ವಿಳಾಸ ನೀಡಲಾಗಿತ್ತು. ಇದರೊಂದಿಗೆ ಕಸಬ್ ಹಿಂದೂ ಎಂದು ನಿರೂಪಿಸುವ ಸಲುವಾಗಿ ಆತನ ಕೈಗೆ ಕೆಂಪುದಾರವೊಂದನ್ನೂ ಕಟ್ಟಲಾಗಿತ್ತು ಎಂಬುದನ್ನೂ ರಾಕೇಶ್ ಮರಿಯಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ಥಾನದ ಐಎಸ್ಐ ಹಾಗೂ ಎಲ್ಇಟಿ ಪ್ರಕಾರ, ದಾಳಿಯಾದ ಬಳಿಕ ಈ ಉಗ್ರರ ಹಿನ್ನೆಲೆ ಪರೀಕ್ಷಿಸಲಾಗುತ್ತದೆ. ಆ ಸಂದರ್ಭ ಇವರ ಹಿಂದೂ ಗುರುತು ಸಿಕ್ಕಿ, ಎಲ್ಲ ಸುದ್ದಿವಾಹಿನಿಗಳು, ಪ್ರಮುಖ ಪತ್ರಕರ್ತರು ಬೆಂಗಳೂರಿನ ವಿಳಾಸಕ್ಕೆ ಹೋಗಿ ಸಂದರ್ಶನ ಮಾಡುತ್ತಾರೆ. ಆಗ ಎಲ್ಲೆಡೆ ಹಿಂದೂ ಉಗ್ರರಿಂದ ಮುಂಬೈ ದಾಳಿ ಎಂಬ ಸುದ್ದಿ ತಿಳಿಯುತ್ತದೆ ಎಂದು ಅಂದುಕೊಂಡಿತ್ತು.
ಆದರೆ, ಅಜ್ಮಲ್ ಕಸಬ್ನನ್ನು ಜೀವಂತವಾಗಿ ಹಿಡಿದ ಬಳಿಕ ಆತ ಬೆಂಗಳೂರು ಮೂಲದವನಲ್ಲ, ಬದಲಾಗಿ ಪಾಕ್ ಮೂಲದವನು ಎಂಬುದು ತಿಳಿಯಿತು.
ಭಾರತದಲ್ಲಿ ಮಸೀದಿಗಳಿಗೆ ಜಾಗವೇ ಇಲ್ಲ. ಇದ್ದ ಎಲ್ಲ ಮಸೀದಿಗಳಿಗೆ ಬೀಗ ಹಾಕಲಾಗಿದೆ. ನಮಾಜ್ಗೆ ಅವಕಾಶವೇ ಇಲ್ಲ. ಈ ರೀತಿಯಾಗಿ ತರಬೇತುದಾರರು ಕಸಬ್ಗೆ ಹೇಳಿ ಕಳುಹಿಸಿದ್ದರು. ಆದರೆ, ಕ್ರೈಂ ಬ್ರಾಂಚ್ನ ಜೈಲಿನಲ್ಲಿದ್ದಾಗ ದಿನಕ್ಕೆ ಐದು ಬಾರಿ ಆಜಾನ್ ಶಬ್ದ ಕೇಳುತ್ತಿದ್ದ ಕಸಬ್ಗೆ ಆಶ್ಚರ್ಯವಾಗಿದ್ದು, ಮಸೀದಿಯನ್ನು ನೋಡಲೂ ಅಧಿಕಾರಿಯೊಂದಿಗೆ ಕಸಬ್ನನ್ನು ಒಮ್ಮೆ ಹೊರಗೆ ಕಳುಹಿಸಲಾಗಿತ್ತು.
ಭಾರತಕ್ಕೆ ಕಳುಹಿಸುವ ಮೊದಲು ಕುಟುಂಬದ ಜೊತೆ ಕಳೆಯಲು ಒಂದು ವಾರ ರಜೆ ಹಾಗೂ 1,25,000 ರೂ. ನೀಡಲಾಗಿತ್ತಂತೆ. ಇದನ್ನು ಕಸಬ್ ತನ್ನ ಸಹೋದರಿಯ ವಿವಾಹಕ್ಕೆ ಬಳಸಿದ್ದ. ಕಸಬ್ ಲಷ್ಕರ್ ಗುಂಪಿಗೆ ಸೇರಿಕೊಂಡಿದ್ದೇ ಹಣಕ್ಕಾಗಿ. ತನ್ನಿಂದ ದರೋಡೆ, ಕಳ್ಳತನದಂಥ ಕೆಲಸ ಮಾಡಿಸಬಹುದು ಎಂದು ಆತ ಅಂದುಕೊಂಡಿದ್ದ ಎಂದು ರಾಕೇಶ್ ಮರಿಯಾ ಹೇಳಿಕೊಂಡಿದ್ದಾರೆ.