ರಾಯಚೂರು, ಫೆ.19 (DaijiworldNews/PY): "ಕಾಂಗ್ರೆಸ್ ಮಾಡಿದ ರಾಜಕೀಯ ಪಿತೂರಿಯಿಂದಾಗಿ ಬಳ್ಳಾರಿಗೆ ಕೆಟ್ಟ ಹೆಸರು ಬಂದಿದೆ. ರಾಜಕೀಯ ಉದ್ದೇಶಕ್ಕಾಗಿಯೇ ಆನಂದ ಸಿಂಗ್ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ" ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಆನಂದ್ ಅವರು ಪ್ರಾಮಾಣಿಕ ವ್ಯಕ್ತಿ, ಅವರು ಅರಣ್ಯ ಸಚಿವರಾಗಿ ಮುಂದುವರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ಆಡಳಿತವಿದ್ದ ಅವಧಿಯಲ್ಲಿ ರಾಜಕೀಯ ಪಿತೂರಿಯಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಬಿಜೆಪಿಯಲ್ಲಿ ಯಾವುದೇ ಆಂತರಿಕಕಲಹವಿಲ್ಲ. ಬಜೆಟ್ ವಿಚಾರವಾಗಿ ಚರ್ಚೆ ನಡೆಸಲು ಶಾಸಕರು ಸೇರಿ ಸಭೆ ನಡೆಸಿದ್ದಾರೆ" ಎಂದರು.
"ದೇಶವನ್ನು ಬೇರೆಯವರಿಗೆ ಒತ್ತೆ ಇಟ್ಟು, ಪಾಕಿಸ್ತಾನ ಪರ ಜೈಕಾರ ಹಾಕುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸದನ ಬಹಿಷ್ಕರಿಸಿರುವ ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕಾರ್ಯ ಮಾಡುತ್ತಿದೆ. ಇದನ್ನು ನೋಡಿಕೊಂಡು ಬಿಜೆಪಿ ಸರ್ಕಾರ ಸುಮ್ಮನೆ ಕೂರುವುದಿಲ್ಲ" ಎಂದು ಹೇಳಿದರು.