ಬೆಂಗಳೂರು, ಫೆ 19 (Daijiworld News/MB) : ನಿಯಮ ಉಲ್ಲಂಘನೆ ಮಾಡಿದವರಿಗೆ ಹಳೆಯ ಪದ್ಧತಿಯಲ್ಲೇ ದಂಡ ವಿಧಿಸುತ್ತಿರುವ ಸಾರಿಗೆ ಇಲಾಖೆಯು ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್ಟಿಒ) ವ್ಯಾಪ್ತಿಯಲ್ಲಿಇ-ಚಲನ್ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಮಾಡಿದೆ.
ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಚಾಲಕರು, ವಾಹನ ಮಾಲೀಕರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯಗಳಲ್ಲಿ ಇ-ಚಲನ್ ವ್ಯವಸ್ಥೆ ಜಾರಿಗೊಳಿಸಲು ಆದೇಶ ಹೊರಡಿಸಿದ್ದು ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆಯು ರಾಜ್ಯದಲ್ಲೂ ಇ-ಚಲನ್ ಜಾರಿಗೆ ತರಲು ಮುಂದಾಗಿದೆ. ಇನ್ನು 2-3 ತಿಂಗಳಲ್ಲಿ ರಾಜ್ಯದಲ್ಲಿ ಇ-ಚಲನ್ ಪದ್ಧತಿಯು ಜಾರಿಗೆ ಬರಲಿದೆ.
ಈ ವ್ಯವಸ್ಥೆಯು ಈಗಾಗಲೇ ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಜಾರಿಯಲ್ಲಿದ್ದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸವಾರರಿಗೆ ದಂಡ ವಿಧಿಸಲು ಪಿಡಿಎ ಯಂತ್ರಗಳನ್ನು ನೀಡಲಾಗಿದೆ. ರಾಜ್ಯದಲ್ಲೂ ಎಲ್ಲಾ ಮೋಟಾರು ವಾಹನ ನಿರೀಕ್ಷಕರಿಗೆ ಪಿಡಿಎ ಯಂತ್ರ ನೀಡಲು ನಿರ್ಧರಿಸಿದ್ದು ಯಂತ್ರಗಳ ಖರೀದಿ ಮಾಡಲು ಶೀಘ್ರದಲ್ಲೇ ಟೆಂಡರ್ ಕರೆಯಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ದಂಡ ವಿಧಿಸಲಾದ ಕೆಲವು ಚಾಲಕ, ಮಾಲೀಕರು ಸ್ಥಳದಲ್ಲೇ ದಂಡದ ಹಣ ಪಾವತಿ ಮಾಡುತ್ತಾರೆ. ಹಣ ಇಲ್ಲದವರು ಆರ್ಟಿಒ ಕಚೇರಿಗಳಿಗೆ ತೆರಳಿ ದಂಡ ಪಾವತಿಸುತ್ತಾರೆ. ಇ-ಚಲನ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಮ್ಯಾನ್ಯುಯಲ್ ವ್ಯವಸ್ಥೆ ಇರುವುದಿಲ್ಲ. ವಾಹನ ಮಾಲೀಕರು ಅಥವಾ ಚಾಲಕರು ದಂಡ ಕಟ್ಟಲು ಆರ್ಟಿಒ ಕಚೇರಿಗಳಿಗೆ ಅಲೆಯಬೇಕಿಲ್ಲ. ಕೈಯಲ್ಲಿ ನಗದು ಇಲ್ಲವೆಂದು ಚಿಂತಿಸಬೇಕಿಲ್ಲ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕವೂ ದಂಡ ಪಾವತಿಸಬಹುದು. ಅಲ್ಲದೇ ದಂಡ ಪಾವತಿ ವಿವರ ಮೊಬೈಲ್ಗೆ ಎಸ್ಎಂಎಸ್ ಬರುವುದರಿಂದ ವಂಚನೆ, ದುರ್ಬಳಕೆಗೆ ಕಡಿವಾಣ ಬೀಳಲಿದೆ.
ಆದರೆ 2019 ರ ಸೆಪ್ಟೆಂಬರ್ನಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ತೀವ್ರ ದಬ್ಬಾಳಿಕೆ ನಡೆಸಲಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ಹಲವಾರು ವಿಲಕ್ಷಣ ಘಟನೆಗಳು ನಡೆದಿದೆ. ನೋಯ್ಡಾದ ನಿವಾಸಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಒಂದು ನಿಮಿಷದ ಅವಧಿಯಲ್ಲಿ ಎರಡು ಇ-ಚಲನ್ಗಳನ್ನು ನೀಡಲಾಗಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಹೆಲ್ಮೆಟ್ ಧರಿಸದೆ ಕಾರು ಚಲಾಯಿಸಿದಕ್ಕಾಗಿ ಇ-ಚಲನ್ ನೀಡಲಾಗಿದೆ ಎಂದು ವರದಿಯಾಗಿದೆ.