ನವದೆಹಲಿ , ಫೆ.19 (DaijiworldNews/PY): ಭಾರತದೊಂದಿಗೆ ದೊಡ್ಡ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಒಪ್ಪಂದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಮೊದಲು ನಡೆಯಲಿದೆಯೋ ಅಥವಾ ನಂತರವೋ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫೆ.24ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಸುಂಕ ಕಡಿತ ಹಾಗೂ ಇತರೆ ರಿಯಾಯಿತಿಗಳು ಬದಲಾಗಿ ವ್ಯಾಪಾರ ಆದ್ಯತೆಗಳು ಪುನಃ ಸ್ಥಾಪಿತವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿಯ ಭೇಟಿ ಸಂದರ್ಭ ಯಾವುದೇ ಮಹತ್ವದ ಒಪ್ಪಂದ ನಡೆಯಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ಮಾತನಾಡಿದ ಟ್ರಂಪ್ ಅವರು, ನಾವು ಭಾರತದೊಂದಿಗೆ ದೊಡ್ಡ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಒಪ್ಪಂದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಮೊದಲು ನಡೆಯಲಿದೆಯೋ ಅಥವಾ ನಂತರವೋ ಎನ್ನುವುದು ಇನ್ನಷ್ಟೇ ತೀರ್ಮಾನವಾಗಬೇಕಿದೆ ಎಂದು ಟ್ರಂಪ್ ಹೇಳಿರುವುದಾಗಿ ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯಾಪಾರ ಒಪ್ಪಂದ ವಿಚಾರದಲ್ಲಿ ಭಾರತ ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಉತ್ತಮವಾಗಿದೆ. ಹೀಗಾಗಿ, ಭಾರತಕ್ಕೆ ಬರಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಫೆಬ್ರವರಿ 24 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಮೊದಲು ಅವರು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿದೆ. 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ಸಂದರ್ಭ ನೀಡಿದ್ದಕ್ಕಿಂತ ದೊಡ್ಡ ಮಟ್ಟದ ಸ್ವಾಗತವನ್ನು ಡೊನಾಲ್ಡ್ ಟ್ರಂಪ್ಗೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.