ಹುಬ್ಬಳ್ಳಿ, ಫೆ.19 (DaijiworldNews/PY): ಕೋರ್ಟ್ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲು ಮಾಡಿದ್ದಾರೆ.
ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನ ಮಾಡಿ ಕೋರ್ಟ್ಗೆ ಕರೆತರಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು.
ಆ ಬಳಿಕ ಆರೋಪಿಗಳನ್ನು ವಾಪಾಸ್ ಕರೆದೊಯ್ಯುವಾಗ ಬಜರಂಗದಳದ ಕೆಲವು ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಹಾಗೆಯೇ, ಪೊಲೀಸ್ ವ್ಯಾನ್ ಎದುರು ಪ್ರತಿಭಟನೆ ನಡೆಸಿ ವ್ಯಾನ್ಗೆ ಬೂಟು, ಚಪ್ಪಲಿ ಎಸೆದಿದ್ದರು ಮತ್ತು ಮುಂದೆ ಸಾಗದಂತೆ ಅಡ್ಡಲಾಗಿ ನಿಂತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ ವಣಕುದುರೆ, ಹದಿನೈದು ಮಂದಿ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.