ಬೆಳಗಾವಿ, ಫೆ 19 (Daijiworld News/MB) : ನಾನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳಲಿ ಎಂದು ಬಯಸುವುದಿಲ್ಲ, ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮಗೂ ಮುಂದಿನ ಚುನಾವಣೆಗಾಗಿ ಪಕ್ಷ ಕಟ್ಟಲು ಹಾಗೂ ಶಕ್ತಿಗಳಿಸಲು ಸಮಯ ಬೇಕಾಗಿದೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ತಳಮಟ್ಟಲದಲ್ಲಿ ಬಲಪಡಿಸಬೇಕಾಗಿದೆ" ಎಂದು ಹೇಳಿದರು.
ಯಡಿಯೂರಪ್ಪ ಅವರು ಭ್ರಷ್ಟಾಚಾರವಿಲ್ಲದಂತೆ ಆಡಳಿತ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅವರೇ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರದ ಕುರಿತಾಗಿ ನಾಣು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಖಜಾನೆಯ ಸ್ಥಿತಿಗತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿ ಎಂದೂ ಕೇಳುವುದಿಲ್ಲ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಖಜಾನೆಯ ಸ್ಥಿತಿ ಏನಿತ್ತು, ಈಗ ಏನಾಗಿದೆ ಎನ್ನುವುದನ್ನು ಸದನದಲ್ಲಿ ಮಾತನಾಡಲು ಸಮರ್ಥರಿದ್ದಾರೆ. ಎಲ್ಲವನ್ನೂ ಅವರೇ ಬಹಿರಂಗ ಮಾಡುತ್ತಾರೆ ಎಂದು ಹೇಳಿದರು.
ನಾವು ಮುಂಬೈಗೆ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್ ಕುಮಾರ್ ಹೇಳಿದ ಹಿನ್ನಲೆಯಲ್ಲಿ ಹೋದೆವು. ದೇವೇಗೌಡರನ್ನು ಮುಗಿಸಬೇಕು ಎಂದು ತಿಳಿಸಿದ್ದರಿಂದ ಹೋಗಿದ್ದೆವು ಎಂದು ಹಿಂದಿನ ಅನರ್ಹ ಶಾಸಕರು ಹೇಳಿದ್ದಾರೆ. ಇದರಿಂದಾಗಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದಿತು. ಎಲ್ಲರಿಗೂ ಇದು ತಿಳಿದಿದೆ. ಹಾಗಾಗಿ ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.
ಜಿ.ಟಿ. ದೇವೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರು ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ. ಅವರು ಕ್ಷೇತ್ರದ ಕೆಲಸ ಮಾಡಿಸುವುದಕ್ಕಾಗಿ, ವಿಧಾನಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ಪರ ಮತ ಚಲಾಯಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ ಅವರು ಬಿಜೆಪಿಗೆ ಹೋಗಿದ್ದರು. ಈಗ ಬಿಜೆಪಿಗೆ ಹೋಗುತ್ತಾರೋ ಅಥವಾ ಕಾಂಗ್ರೆಸಿಗೆ ಹೋಗುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ಯಾರನ್ನೂ ಕೂಡಾ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎಚ್. ಕೋನರೆಡ್ಡಿ, ನಾಸಿರ ಬಾಗವಾನ, ಅಶೋಕ ಪೂಜಾರಿ, ಶಂಕರ ಮಾಡಲಗಿ, ಫೈಜುಲ್ಲ ಮಾಡಿವಾಲೆ ಉಪಸ್ಥಿತರಿದ್ದರು.