ಕೋಲ್ಕತಾ, ಫೆ.19 (DaijiworldNews/PY): "ಮಾಜಿ ತೃಣಮೂಲ ಕಾಂಗ್ರೆಸ್ ಸಂಸದ ತಪಸ್ ಪಾಲ್ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಸಿಬಿಐ ಒತ್ತಡದಿಂದಾಗಿ ನಾವು ಮೂರು ಜನರನ್ನು ಕಳೆದುಕೊಂಡಿದ್ದೇವೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಾಜಿ ಸಂಸದ ತಪಸ್ ಪಾಲ್ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, "ಸಿಬಿಐ ಒತ್ತಡದಿಂದಾಗಿ ನಾವು ಮೂರು ಜನರನ್ನು ಕಳೆದುಕೊಂಡಿದ್ದೇವೆ. ಈ ಹಿಂದೆ ತೃಣಮೂಲ ಕಾಂಗ್ರೆಸ್ ಸಂಸದ ಪ್ರಸೂನ್ ಬ್ಯಾನರ್ಜಿಯವರ ಪತ್ನಿ ಹಾಗು ನಮ್ಮ ನಾಯಕ ಸುಲ್ತಾನ್ ಅಹಮದ್ ಅವರನ್ನು ಕಳೆದುಕೊಂಡಿದ್ದೇವೆ, ಈಗ ತಪಸ್ ಅವರನ್ನು ಕಳೆದುಕೊಂಡಿದ್ದೇವೆ" ಎಂದರು.
"ಸಿಬಿಐ ನಂತಹ ಏಜೆನ್ಸಿಗಳ ಒತ್ತಡದಿಂದ ನಡೆಯುತ್ತಿರುವ ಇಂತಹ ಸಾವುಗಳನ್ನು ನಾವು ಪ್ರತಿಭಟಿಸುತ್ತೇವೆ. ಈ ಸಾವಿನಿಂದಾಗಿ ಇಡೀ ತೃಣಮೂಲ ಕಾಂಗ್ರೆಸ್ ಕುಟುಂಬ ದುಖಃದಲ್ಲಿದೆ. ಕೇಂದ್ರ ಸರ್ಕಾರ ಪ್ರತೀಕಾರದ ಆಟ ಆಡುತ್ತಿದ್ದು, ತಪಸ್ ಪಾಲ್ ವಿರುದ್ಧ ಯಾವುದೇ ಚಾರ್ಚ್ಶೀಟ್ ಸಲ್ಲಿಸದೆ ಒಂದು ವರ್ಷಗಳ ಕಾಲ ಜೈಲಿನಲ್ಲಿಡಲಾಗಿತ್ತು. ಇವರ ಹಠಾತ್ ಸಾವು ನನಗೆ ಆಘಾತವುಂಟುಮಾಡಿದೆ. ಇವರ ಸಾವಿಗೆ ಸಿಬಿಐ ನೀಡಿದ ನಿರಂತರ ಕಿರುಕುಳವೇ ಕಾರಣ" ಎಂದಿದ್ದಾರೆ.
ರೋಸ್ ವ್ಯಾಲಿ ಸಮೂಹವನ್ನು ನಡೆಸಲು ಪೋಂಜಿ ಯೋಜನೆಯ ಅಡಿಯಲ್ಲಿ ಸಹಾಯ ಮಾಡಿದ ಆರೋಪದ ಮೇಲೆ ತಪಸ್ ಪಾಲ್ ಅವರನ್ನು ಡಿಸೆಂಬರ್ 2016 ರ ಕೊನೆಯಲ್ಲಿ ಸಿಬಿಐ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಅಲ್ಲದೆ, ನಿರಂತರ ವಿಚಾರಣೆ ನಡೆಸಿತ್ತು ಇದೀಗ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.