ಅಹಮದಾಬಾದ್ , ಫೆ 19 (Daijiworld News/MB) : ಮಹಿಳೆ ಋತುಚಕ್ರದ ಸಮಯದಲ್ಲಿ ಯಾರನ್ನೂ ಮುಟ್ಟುವಂತಿಲ್ಲ. ಋತುಮತಿಯರು ಅಡುಗೆ ಮಾಡಿ ಬಡಿಸಿದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಅಥವಾ ವೇಶ್ಯೆಯಾಗಿ ಹುಟ್ಟುತ್ತಾರೆ, ಹಾಗೆಯೇ ಅವರು ಮಾಡಿದ ಅಡುಗೆ ಊಟ ಮಾಡಿದರೆ ಎತ್ತಾಗಿ ಹುಟ್ಟುತ್ತಾರೆ ಎಂದು ಇಲ್ಲಿನ ಭುಜ್ ನಗರದ ಸ್ವಾಮಿ ನಾರಾಯಣ್ ಮಂದಿರದ ಕೃಷ್ಣಸ್ವರೂಪ್ ದಾಸ್ ಜೀ ವಿವಾದಾದತ್ಮಕ ಹೇಳಿಕೆ ನೀಡಿದ್ದಾರೆ.
ಮೌಢ್ಯ ನಾಶವಾಗುತ್ತಿರುವ ಸಮಯದಲ್ಲಿ ಈ ರೀತಿ ಮೌಢ್ಯ ಹೇಳಿಕೆ ನೀಡುವುದರ ಮೂಲಕ ಕೃಷ್ಣಸ್ವರೂಪ್ ದಾಸ್ ಜೀ ವಿವಾದಕ್ಕೆ ಗುರಿಯಾಗಿದ್ದಾರೆ.
ಅಷ್ಟು ಮಾತ್ರವಲ್ಲದೇ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಅವರು, "ನಾನು ಹೇಳಿದ ಮಾತಿನ ಬಗ್ಗೆ ನೀವು ಏನು ಬೇಕಾದರೂ ಭಾವಿಸಿಕೊಳ್ಳಿ. ಆದರೆ ಶಾಸ್ತ್ರದಲ್ಲಿ ಈ ರೀತಿಯೇ ಬರೆಯಲಾಗಿದೆ. ನಾನು ಅದನ್ನೇ ನಿಮಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಕೃಷ್ಣಸ್ವರೂಪ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಅನೇಕ ಮಂದಿ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಸಿಲಿ ಎಂದು ಆಗ್ರಹ ಮಾಡಿದ್ದಾರೆ. ಇನ್ನೂ ಕೆಲವರು ಸಮಾಜಕ್ಕೆ ಬೋಧನೆ ಮಾಡುವವರೇ ಈ ರೀತಿ ಮೌಢ್ಯ ಹೇಳಿಕೆ ನೀಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವಾಮಿ ನಾರಾಯಣ್ ಮಂದಿರ ನಡೆಸುತ್ತಿರುವ ಶಾಲೆಯಲ್ಲಿ ಋತುಮತಿಯರನ್ನು ಗುರುತಿಸಲು 60 ವಿದ್ಯಾರ್ಥಿನಿಯರ ಒಳ ಉಡುಪು ಕಳಚುವಂತೆ ಸೂಚನೆ ನೀಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣ ಚರ್ಚೆಯಲ್ಲಿರುವಾಗಲೇ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.