ಗುವಾಹಟಿ, ಫೆ.19 (DaijiworldNews/PY): ಅಸ್ಸಾಂನ ವಿದೇಶಿಯರ ಟ್ರಿಬ್ಯೂನಲ್ ಜಬೇದಾ ಬೇಗಂ(50ವರ್ಷ) ಅವರನ್ನು ವಿದೇಶಿ ಎಂದು ಘೋಷಿಸಿದ್ದು, ಟ್ರಿಬ್ಯೂನಲ್ ತೀರ್ಪು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಷ್ಟು ಆರ್ಥಿಕ ಶಕ್ತಿ ಆಕೆ ಬಳಿ ಇಲ್ಲ ಎಂದು ವರದಿ ತಿಳಿಸಿದೆ.
ಜಬೇದಾ ಬೇಗಂ ಅಸ್ಸಾಂನ ಬಕ್ಸಾ ಜಿಲ್ಲೆಯ ಕುಗ್ರಾಮದ ನಿವಾಸಿಯಾಗಿದ್ದಾರೆ. ಇವರ ಪತ್ನಿ ರಜಾಕ್ ಅಲಿ ಅನಾರೋಗ್ಯ ಪೀಡಿತರಾಗಿದ್ದು, ಹಾಸಿಗೆ ಹಿಡಿದಿದ್ದಾರೆ. ದಂಪತಿಗೆ 3 ಮಕ್ಕಳಿದ್ದರು. ಒಬ್ಬಾಕೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬಳು ನಾಪತ್ತೆಯಾಗಿದ್ದಾಳೆ. ಮೂರನೇಯ ಅಸ್ಮಿನಿಯಾ 5ನೇ ತರಗತಿ ವಿದ್ಯಾರ್ಥಿನಿ. ಇಡೀ ಕುಟುಂಬವನ್ನು ಸಾಕುವ ಹೊಣೆ ಜಬೇದಾ ಬೇಗಂ ಅವರದ್ದಾಗಿದೆ.
ತಾನು ದುಡಿದು ಉಳಿಸಿದ್ದ ಹಣವೆಲ್ಲಾ ಕಾನೂನು ಹೋರಾಟಕ್ಕೆ ಖರ್ಚಾಗಿದ್ದು, ಇದೀಗ ಅಸ್ಮಿನಿಯಾ ಭವಿಷ್ಯದ ಬಗ್ಗೆ ಜಬೇದಾಗೆ ದೊಡ್ಡ ಚಿಂತೆಯಾಗಿದೆಯಂತೆ. ನನಗೀಗ ಎಲ್ಲಾ ಭರವಸೆ ಹೊ೦ರಟು ಹೋಗಿದೆ ಎಂದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ವರದಿ ತಿಳಿಸಿದೆ.
2018ರಲ್ಲಿ ಗೋಯಾಬರಿ ಗ್ರಾಮದ ಜಬೇದಾ ವಿದೇಶಿ ಪ್ರಜೆ ಎಂದು ಟ್ರಿಬ್ಯುನಲ್ ತೀರ್ಪು ನೀಡಿತ್ತು. ಈ ವಿಚಾರವಾಗಿ ಗುವಾಹಟಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಭೂ ಕಂದಾಯ ರಶೀದಿ, ಬ್ಯಾಂಕ್ ದಾಖಲೆ, ಪ್ಯಾನ್ ಕಾರ್ಡ್ ಪೌರತ್ವ ಸಾಬೀತುಪಡಿಸುವ ದಾಖಲೆಯಲ್ಲ ಎಂದು ತೀರ್ಪು ನೀಡಿದೆ.
ತಾನು ಭಾರತೀಯಳು ಎಂದು ಸಾಬೀತುಪಡಿಸಲು ಜಬೇದಾ ಟ್ರಿಬ್ಯುನಲ್ಗೆ ವೋಟರ್ ಐಡಿ ಸೇರಿದಂತೆ 15 ದಾಖಲೆಗಳನ್ನು ನೀಡಿದ್ದರು. 1966, 1970, 1971ರ ಆಕೆಯ ತಂದೆ ಜಬೇದ್ ಅಲಿಯ ವೋಟರ್ ಲಿಸ್ಟ್ ಅನ್ನು ನೀಡಿದ್ದರು. ಆದರೆ ಜಬೇದಾ ತಂದೆ ಬಗ್ಗೆ ನೀಡಿದ್ದ ಪುರಾವೆ ಸಮಾಧಾನಕರವಾಗಿಲ್ಲ ಎಂದು ಟ್ರಿಬ್ಯುನಲ್ ತಿಳಿಸಿತ್ತು.
ತಂದೆ, ತಾಯಿಯ ಜನ್ಮ ಪ್ರಮಾಣ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಅಧ್ಯಕ್ಷರ ಸರ್ಟಿಫಿಕೇಟ್ ಅನ್ನು ಜಬೇದಾ ಸಲ್ಲಿಸಿದ್ದರು. ಆದರೆ ಟ್ರಿಬ್ಯುನಲ್ ಕೋರ್ಟ್ ಅದನ್ನು ದಾಖಲೆ ಎಂದು ಸ್ವೀಕರಿಸಲು ನಿರಾಕರಿಸಿತ್ತು.