ಬಿಹಾರ, ಫೆ.19 (DaijiworldNews/PY): ಮಿಷನರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಸಂಸ್ಕಾರ ಕೊರತೆ ಇದೆ ಆದ್ದರಿಂದ ಅವರು ವಿದೇಶಕ್ಕೆ ಹೋದ ನಂತರ ಬೀಫ್ ಸೇವಿಸುವ ಅಭ್ಯಾಸವನ್ನು ಮಾಡುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಿಹಾರದ ಬೆಗುಸರೈನಲ್ಲಿರುವ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಸಿಂಗ್ ಈ ಹೇಳಿಕೆ ನೀಡಿದ ಅವರು, ಸರ್ಕಾರಿ ಶಾಲೆಯಿಂದ ಹಿಡಿದು ಖಾಸಗಿ ಶಾಲೆಗಳ ತನಕ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕ, ಹನುಮಾನ್ ಚಾಲೀಸಾಗಳನ್ನು ಹೇಳಿಕೊಡಬೇಕು. ಅದನ್ನು ರೂಢಿ ಮಾಡಿಕೊಳ್ಳಬೇಕು. ಇದನ್ನು ಆರಂಭಿಸುವುದರಿಂದ ನಮ್ಮ ಮೇಲೆ ಕೇಸರೀಕರಣದ ಆರೋಪ ಬರಬಹುದು. ಅದಾಗಿಯೂ, ಇಲ್ಲಿರುವ ಎಲ್ಲ ಪಾಲಕರಲ್ಲಿ ಕೇಳಿಕೊಳ್ಳುವುದು ಇಷ್ಟೆ- ಖಾಸಗಿ ಶಾಲೆಗಳಲ್ಲೂ ಗೀತೆ, ಹನುಮಾನ್ ಚಾಲೀಸಾ ಹೇಳಿಕೊಡಬೇಕು ಎಂಬ ಆಗ್ರಹ ನಿಮ್ಮ ಕಡೆಯಿಂದ ಬರಬೇಕು ಎಂದರು.
ಖಾಸಗಿ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ಭಗವದ್ಗೀತೆ ಹಾಗೂ ಹನುಮಾನ್ ಚಾಲಿಸಾ ಶ್ಲೋಕಗಳನ್ನು ಕಲಿಸಬೇಕು. ಏಕೆಂದರೆ ಮಿಷನರಿಗಳು ನಡೆಸುವ ಶಾಲೆಗಳಲ್ಲಿ, ಉತ್ತಮ ಕುಟುಂಬಗಳ ಮಕ್ಕಳು ಶೈಕ್ಷಣಿಕವಾಗಿ ಉತ್ಕೃಷ್ಟರಾಗಿದ್ದಾರೆ. ಜೀವನದಲ್ಲಿ ಯಶಸ್ವಿಯಾಗಿ ಉದ್ಯೋಗಕ್ಕೆ ಸೇರುತ್ತಾರೆ ಎಂಬುದು ಸತ್ಯ. ಆದರೆ ಅವರು ವಿದೇಶಕ್ಕೆ ಹೋದಾಗ ಬೀಫ್ ತಿನ್ನುವ ಅಭ್ಯಾಸವನ್ನು ಮಾಡುತ್ತಾರೆ. ಏಕೆ ಹೀಗೆ? ನಾವು ಅವರಿಗೆ ಸಂಸ್ಕಾರ ಕಲಿಸಲಿಲ್ಲ ಎಂಬುವುದೇ ಇದಕ್ಕೆ ಕಾರಣ ಎಂದರು.
ಪದೇ ಪದೇ ನಮ್ಮನ್ನು ಸಂಪ್ರದಾಯವಾದಿಗಳು ಎಂದು ಹೇಳಲಾಗುತ್ತಿದೆ. ನಮ್ಮ ಸಂಸ್ಕೃತಿಗೆ ಅಂಥದ್ದೊಂದು ಚೌಕಟ್ಟಿದೆ. ನಾವು ಇರುವೆಗಳಿಗೆ ಸಕ್ಕರೆ ಹಾಕುತ್ತೇವೆ, ಹಾವಿಗೆ ಹಾಲೆರೆಯುತ್ತೇವೆ. ಆದರೆ, ಕೆಲವೊಮ್ಮೆ ಇಂತಹ ಹಾವೇ ನಮ್ಮನ್ನು ಕಡಿಯಬಹುದು ಎಂದು ಹೇಳಿದರು.