ನವದೆಹಲಿ, ಫೆ.19 (DaijiworldNews/PY): ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಅರವಿಂದ ಕೇಜ್ರಿವಾಲ್ ಅವರು ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ಗೃಹ ಕಚೇರಿಯಲ್ಲಿ ಭೇಟಿಯಾಗಿದ್ದಾರೆ.
ಕೇಂದ್ರ ಗೃಹ ಕಚೇರಿಯಲ್ಲಿ ಈ ಮೊದಲು ನಿಗದಿಯಾಗಿದ್ದ ಭೇಟಿಯೂ ಬಳಿಕ ಅಮಿತ್ ಶಾ ಅವರ ನಿವಾಸದಲ್ಲಿ ನಡೆಯಿತು. ಉಭಯ ನಾಯಕರು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಅಮಿತ್ ಶಾ ಭೇಟಿ ಬಳಿಕ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದೆ. ಉತ್ತಮ ಹಾಗೂ ಫಲಪ್ರದವಾದ ಸಭೆ ನಡೆಸಿದ್ದೇವೆ. ದೆಹಲಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ದೆಹಲಿಯ ಅಭಿವೃದ್ದಿಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ನಾವು ಇಬ್ಬರೂ ಒಪ್ಪಿದ್ದೇವೆ ಎಂದು ತಿಳಿಸಿದ್ದಾರೆ.
ಫೆ.11ರಂದು ಪ್ರಕಟವಾಗಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಎಎಪಿ ವಿರುದ್ಧ ಬಿಜೆಪಿಯು ಹೀನಾಯ ಸೋಲನುಭವಿಸಿತ್ತು.