ನವದೆಹಲಿ, ಫೆ.19 (DaijiworldNews/PY): ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ಆರಂಭಿಸಿದ್ದು, ಎಲ್ಲರ ಸಹಕಾರದೊಂದಿಗೆ ಅಂತಿಮ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರೊಂದಿಗೂ ನಾವು ಮಾತನಾಡುತ್ತೇವೆ. ನಾವು ಸುಪ್ರೀಂ ನಿರ್ದೇನದ ಮೇರೆಗೆ ಇಲ್ಲಿಗೆ ಬಂದಿದ್ದೇವೆ. ಎಲ್ಲರ ಸಹಕಾರದೊಂದಿಗೆ ಈ ವಿಚಾರಕ್ಕಾಗಿ ಅಂತಿಮ ಪರಿಹಾರ ಸಿಗಲಿದೆ ಎಂದರು.
ಈ ವಿಚಾರವಾಗಿ ಮಾತನಾಡಿದ ರಾಮಚಂದ್ರನ್ ಅವರು, ಸುಪ್ರೀಂ ಕೋರ್ಟ್ ನಿಮ್ಮ ಪ್ರತಿಭಟನೆಯ ಹಕ್ಕನ್ನು ಎತ್ತಿಹಿಡಿದಿದೆ. ಉಳಿದ ಜನರಿಗೂ ಅವರದ್ದೇ ಆದ ಹಕ್ಕುಗಳಿವೆ. ಹಾಗಾಗಿ ಅದಕ್ಕೂ ಕೂಡಾ ನಾವು ಗಮನ ಕೊಡಬೇಕು. ನಾವು ಪ್ರತಿಯೊಬ್ಬರ ಮಾತನ್ನು ಕೇಳುತ್ತೇವೆ. ನಾವೆಲ್ಲಾ ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಅಧಿಕಾರಿ ವಾಜಾಹತ್ ಹಬಿಬುಲ್ಲಾ ಅವರನ್ನು ಕೂಡಾ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದೆ. ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಂವಹನಕಾರರನ್ನು ನಾನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹಬಿಬುಲ್ಲಾ ತಿಳಿಸಿದರು.