ಬೆಂಗಳೂರು, ಫೆ.19 (DaijiworldNews/PY): ಕಾಂಗ್ರೆಸ್ನಲ್ಲಿ ಇದ್ದಂತಹ ಎಲ್ಲಾ ಕೊರೊನಾ ವೈರಸ್ಗಳನ್ನು ಆಪರೇಷನ್ ಕಮಲ, ಕುದುರೆ ವ್ಯಾಪಾರದ ಮೂಲಕ ಬಿಜೆಪಿಯು ತನ್ನೊಳಗೆ ಸೇರಿಸಿಕೊಂಡಿದೆ ಎಂದು ಕಾಂಗ್ರೆಸ್ ಘಟಕ ತಿಳಿಸಿದೆ.
ಇತ್ತೀಚೆಗೆ ಸಚಿವ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದು, ಕಾಂಗ್ರೆಸ್ನಲ್ಲಿ ದೊಡ್ಡ ದೊಡ್ಡ ಕೊರೊನಾ ವೈರಸ್ಗಳಿವೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ರಾಜ್ಯ ಕಾಂಗ್ರೆಸ್, ಎಸ್.ಟಿ.ಸೋಮಶೇಖರ್ ಆದಿಯಾಗಿ ಕಾಂಗ್ರೆಸ್ನಲ್ಲಿ ಇದ್ದಂತಹ ಎಲ್ಲಾ ಕೊರೊನಾ ವೈರಸ್ಗಳನ್ನು ಆಪರೇಷನ್ ಕಮಲ, ಕುದುರೆ ವ್ಯಾಪಾರದ ಮೂಲಕ ಬಿಜೆಪಿಯು ತನ್ನೊಳಗೆ ಸೇರಿಸಿಕೊಂಡಿದೆ ಎಂದು ಹೇಳಿದೆ.
ಈಗ ಇದೇ ಕೊರೊನಾ ವೈರಸ್ಗಳು ಸರ್ಕಾರವನ್ನು ಬ್ಲಾಕ್ಮೇಲ್ ಮಾಡಿ ಅಲುಗಾಡಿಸುವ ಬೆದರಿಕೆಯೊಡ್ಡಿ ಒಳಗಿಂದೊಳಗೆ ರೋಗಗ್ರಸ್ತರನ್ನಾಗಿಸಿ ನಿಷ್ಕ್ರಿಯಗೊಳಿಸಿವೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು 6 ತಿಂಗಳೇ ಆಗಿದ್ದರೂ ಸಹ ಅಭಿವೃದ್ಧಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲದೆ, ಅನರ್ಹ ಶಾಸಕರ ಕಾರಣದಿಂದಾಗಿ ಸಿಎಂ ಬಿಎಸ್ವೈ ಅವರು ಸಂಪುಟ ರಚನೆ ಹಾಗೂ ವಿಸ್ತರಣೆಗೆ ಸುಮಾರು 2-3 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದರು. ಇದೀಗ ಕೇವಲ ವಲಸಿಗರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ಹಲವಾರು ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.