ಬೆಂಗಳೂರು, ಫೆ.19 (DaijiworldNews/PY): ಆನೆಗೊಂದಿ ಉತ್ಸವದಲ್ಲಿ ಸಾಹಿತಿ ಸಿರಾಜ್ ಬಿಸರಳ್ಳಿ ಅವರು ವಾಚಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕವನವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸದನದಲ್ಲೇ ವಾಚಿಸಿದ್ದಾರೆ.
ಕಲಾಪದಲ್ಲಿ ಭಾಗವಹಿಸಿದ್ದ ಎಚ್ಡಿಕೆ ಅವರು ಸಿರಾಜ್ ಬಿಸರಳ್ಳಿ ಕವನವನ್ನು ಸದನದಲ್ಲೇ ಓದಿದರು, ಬಳಿಕ ಸಿರಾಜ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕವನದಲ್ಲಿ ಆಕ್ಷೇಪಿಸುವಂಥದ್ದು ಏನಿದೆ? ನಿಸಾರ್ ಅಹಮದ್ ಅವರು ‘ಕುರಿಗಳು ಸಾರ್ ಕುರಿಗಳು’ ಬರೆದಿದ್ದು ರಾಜಕಾರಣಿಗಳನ್ನು ಉದ್ದೇಶಿಸಿಯೇ. ಆಗ ಅವರನ್ನು ಬಂಧಿಸಲಾಗಿತ್ತೆ ಎಂದು ಕೇಳಿದರು.
ಅಡಿಗರು ಹಿಂದೊಂದು ಬಾರಿ ಬರೆದ ಕವನವೊಂದು ಚರ್ಚೆಗೆ ಗುರಿಯಾಗಿತ್ತು. ಆದರೆ, ಈಗ ಸಾಹಿತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜಾಮೀನಿಗಾಗಿ ಅಲೆಯುವಂತೆ ಮಾಡಲಾಗಿದೆ ಎಂದರು.
ನೀ ಯಾವಾಗ ದಾಖಲೆ ನೀಡುತ್ತೀ ಎಂಬ ಕವನವನ್ನು ಸಿರಾಜ್ ಆನೆಗೊಂದಿ ಉತ್ಸವದಲ್ಲಿ ವಾಚಿಸಿದ್ದರು. ರಾಜಾಭಕ್ಷಿ ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಬಿತ್ತರಿಸಿದ್ದರು. ಈ ಇಬ್ಬರ ವಿರುದ್ಧ ಬಿಜೆಪಿ ಯುವ ಮೋರ್ಚಾದ ಮುಖಂಡರೊಬ್ಬರು ನೀಡಿದ ದೂರಿ ಅನ್ವಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಅವರಿಗೆ ಜಾಮೀನು ನಿರಾಕರಣೆಯಾಗಿದ್ದು, ಇದೇ ಹಿನ್ನೆಲೆಯಲ್ಲಿ ಇಬ್ಬರೂ ಬುಧವಾರ ನ್ಯಾಯಾಲಯ ಹಾಜರಾಗಿದ್ದಾರೆ.