ಬೆಂಗಳೂರು, ಫೆ 18 (DaijiworldNews/SM): ಹಿಂದೂ ಧರ್ಮದ ಸ್ಥಾಪನೆಗೆ ಛತ್ರಪತಿ ಶಿವಾಜಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಒಂದೊಮ್ಮೆ ಹಿಂದೂ ಸಾಮ್ರಾಜ್ಯದ ಸ್ಥಾಪನೆಗಾಗಿ ಛತ್ರಪತಿ ಶಿವಾಜಿ ತ್ಯಾಗ ಮಾಡದೇ ಹೋಗಿದ್ದರೆ, ಭಾರತ ಮತ್ತೊಂದು ಪಾಕ್ ಆಗುತ್ತಿತ್ತು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಸ್ತವಾಂಶ ಮಾತನಾಡಿದರೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲ. ಒಂದೊಮ್ಮೆ ಭಾರತ ದೇಶದಲ್ಲಿ ಛತ್ರಪತಿ ಶಿವಾಜಿ ಜನಿಸದೇ ಇದ್ದಿದ್ದರೆ, ಇಂದು ದೇಶದಲ್ಲಿರುವ ಮಾತೆಯರ ಹಣೆಯಲ್ಲಿ ಕುಂಕುಮ ಇರುತ್ತಿರಲಿಲ್ಲ ಎಂದರು.
ಇನ್ನು ಇತಿಹಾಸದಲ್ಲಿ ಶಿವಾಜಿ ಅವರ ಸಾಧನೆ ಬಗ್ಗೆ ಉಲ್ಲೇಖಗಳು ಕಡಿಮೆ ಇವೆ. ಕೆಲವೊಬ್ಬರು ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದ್ದರೆ, ಇನ್ನು ಕೆಲವರಿಗೆ ಅವರ ಸಾಧನೆಗಳ ಬಗ್ಗೆ ಅರಿವೇ ಇಲ್ಲ. ಇನ್ನು ಹಿಂದೂ ಧರ್ಮವನ್ನು ಉಳಿಸಲು ನಮ್ಮ ಹಿಂದೂ ಧರ್ಮದ ಭಾವನೆಯನ್ನು ಬಲಗೊಳಿಸಬೇಕಾಗಿದೆ ಎಂದರು. ತಾವು ಮತ ಹಾಕುವ ಪಕ್ಷ ಯಾವುದೇ ಇರಲಿ ಆದರೆ, ಹಿಂದುತ್ವವನ್ನು ಮಾತ್ರ ಮರೆಯಬಾರದು ಎಂದಿದ್ದಾರೆ.