ನವದೆಹಲಿ, ಫೆ 20 (Daijiworld News/MB) : "ದೇಶದ ಆರ್ಥಿಕ ಪರಿಸ್ಥಿತಿ ವಿಚಾರಕ್ಕೆ ಸಂಬಂಧಿಸಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈ ಸರ್ಕಾರ ಮಂದಗತಿ ಎಂಬ ಪದ ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಇದು ಅಪಾಯದ ವಿಚಾರವಾಗಿದೆ. ಸರ್ಕಾರ ಸಮಸ್ಯೆಯನ್ನು ಗುರುತಿಸುವಲ್ಲೇ ವಿಫಲವಾದರೆ, ಅದಕ್ಕೆ ಉತ್ತರವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.
ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ‘ಬ್ಯಾಕ್ಸ್ಟೇಜ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಅಹ್ಲುವಾಲಿಯಾ ಅವರು ಈ ಕೃತಿಯಲ್ಲಿ ಯುಪಿಎ ಸರ್ಕಾರ ದುರ್ಬಲ ಮತ್ತು ಗುಣಾತ್ಮಕ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಷಯಗಳು ಚರ್ಚೆಯಾಗಬೇಕಾದಂತಹ ವಿಚಾರಗಳು. ಏಕೆಂದರೆ, ಪ್ರಸ್ತುತ ಇರುವ ಸರ್ಕಾರವು ‘ಮಂದಗತಿ’ ಎಂಬ ಪದ ಇದೆ ಎನ್ನುವುದನ್ನೇ ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರದ ಅಭಿವೃದ್ಧಿಗೆ ಮಾರಕ" ಎಂದು ತಿಳಿಸಿದರು.
ಪಿ.ಚಿದಂಬರಂ, ಅಹ್ಲುವಾಲಿಯಾ ಆರ್ಥಿಕತೆ ಉದಾರೀಕರಣ ಸಂದರ್ಭದಲ್ಲಿ ನನ್ನ ಬೆಂಬಲಕ್ಕಿದ್ದರು. ಹಲವು ವಿರೋಧಗಳು ಎದುರಾದರೂ ಹಲವು ಸುಧಾರಣೆಗಳನ್ನು ತರಲು ಇದು ಸಹಕಾರಿಯಾಯಿತು ಎಂದರು.