ಹೈದರಾಬಾದ್, ಫೆ 20 (Daijiworld News/MB) : "ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) 21ನೇ ಶತಮಾನದ ಅತೀ ದೊಡ್ಡ ಮೂರ್ಖತನ" ಎಂದು ಬಿಜೆಪಿ ಮುಖಂಡ, ರಾಜ್ಯಸಭೆಯ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪ್ರಜ್ಞಾ ಭಾರತಿ ಸಂಸ್ಥೆ ಆಯೋಜಿಸಿದ್ದ 'ಇಂಡಿಯಾ- ಆ್ಯನ್ ಇಕನಾಮಿಕ್ ಸೂಪರ್ಪವರ್ ಬೈ 2030' ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, "ಭಾರತ ವಾರ್ಷಿಕ 10% ಅಭಿವೃದ್ಧಿ ಸಾಧಿಸಿದರೆ ಮಾತ್ರ 2030ರ ವೇಳೆಗೆ ಜಗತ್ತಿನ ಸೂಪರ್ಪವರ್ ಆಗಲು ಸಾಧ್ಯ" ಎಂದು ಹೇಳಿದರು.
"ಜಿಎಸ್ಟಿ 21 ನೇ ಶತಮಾನದ ಅತೀ ದೊಡ್ಡ ಮೂರ್ಖತನವಾಗಿದ್ದು ಯಾರಿಗೂ ಯಾವ ಫಾರ್ಮ್ನ್ನು ಎಲ್ಲಿ ತುಂಬಿಸಬೇಕು ಎಂಬುದು ಗೊತ್ತಿಲ್ಲ. ಅಷ್ಟು ಮಾತ್ರವಲ್ಲದೇ ಅದನ್ನು ಕಂಪ್ಯೂಟರ್ನಲ್ಲಿ ಅಪ್ಲೋಡ್ ಮಾಡಬೇಕಿದೆ. ಆರ್ಥಿಕ ಅಭಿವೃದ್ಧಿಯಾಗಬೇಕಾದಲ್ಲಿ ಹಾಗೂ ಭ್ರಷ್ಟಾಚಾರ ನಿಲ್ಲಬೇಕಾದಲ್ಲಿ ಆದಾಯ ತೆರಿಗೆ ರದ್ದಾಗಬೇಕು" ಎಂದು ಅಭಿಪ್ರಾಯಪಟ್ಟರು.
"ಭಾರತ 2030 ರಲ್ಲಿ ಸೂಪರ್ ಪವರ್ ಆಗಬೇಕಾದ್ದಲ್ಲಿ ವಾರ್ಷಿಕ ಶೇ.೧೦ ಅಭಿವೃದ್ಧಿ ಸಾಧಿಸಬೇಕು. ಶೇ.10 ಅಭಿವೃದ್ಧಿ ಸಾಧಿಸಬೇಕಾದಲ್ಲಿ ಜಿಡಿಪಿ ಶೇ. 37 ಇರಬೇಕು. ಆದರೆ ಈಗ ಕೇವಲ ಶೇ.5 ಇದೆ" ಎಂದು ಅವರು ಹೇಳಿದರು.
"ಹಾಗೆಯೇ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಅಧಿಕಾರದ ಸಂದರ್ಭದಲ್ಲಿ ಜಾರಿಗೆ ತಂದ ಸುಧಾರಣಾ ಪ್ರಕ್ರಿಯೆಗಳಿಗಾಗಿ ಅವರಿಗೆ ಭಾರತ ರತ್ನ ನೀಡಬೇಕು" ಎಂದರು.
"ನರಸಿಂಹ ರಾವ್ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಜಾರಿ ಮಾಡಿದ ಇತರೆ ಸುಧಾರಣಾ ನೀತಿಗಳಲ್ಲಿ ಆ ನಂತರ ಯಾವುದೇ ಪ್ರಗತಿಯಾಗಿಲ್ಲ. ಹೋರಾಟ ಭ್ರಷ್ಟಾಚಾರದ ವಿರುದ್ಧವಾಗಿ ನಡೆಯಬೇಕು. ಹಾಗೆಯೇ ಹೂಡಿಕೆದಾರರನ್ನು ಜಿಎಸ್ಟಿ ವಿಚಾರವಾಗಿ ಬೆದರಿಸುವ ಬದಲಾಗಿ ಅವರನ್ನು ಪುರಸ್ಕರಿಸಬೇಕು" ಎಂದು ಬಿಜೆಪಿ ಮುಖಂಡ, ರಾಜ್ಯಸಭೆಯ ಸಂಸದ ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.