ಬೆಂಗಳೂರು, ಫೆ 20 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019 ಡಿ. 19 ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಗಲಭೆಗೆ ಕಾರಣವಾದರೆಂದು ಆರೋಪಿಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 21 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಈ ಪ್ರಕರಣದ ಆರೋಪಿಗಳಲ್ಲಿ 21 ಮಂದಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹಾಗೆಯೇ ಆರೋಪಿಗಳ ಮೇಲೆ ಯಾವುದೇ ನೇರ ಸಾಕ್ಷ್ಯಗಳಿಲ್ಲ, ತನಿಖೆ ದುರುದ್ಧೇಶದ್ದು ಹಾಗೂ ಪಕ್ಷಪಾತೀಯಾದದ್ದು ಎಂದು ಅಭಿಪ್ರಾಯಪಟ್ಟಿದೆ.
ಆರೋಪಿಗಳು ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ನೀಡಬೇಕು. ಅವಶ್ಯಕತೆ ಇದ್ದಾಗ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಈ ಸನ್ನಿವೇಶವನ್ನು ಗಮನಿಸಿದರೆ ಅರ್ಜಿದಾರರಿಗೆ ಜಾಮೀನು ನೀಡದಿದ್ದಲ್ಲಿ ನ್ಯಾಯವನ್ನು ಅಣಕಿಸಿದಂತೆ ಆಗುತ್ತದೆ. ಹಾಗೆಯೇ ಅವರ ಸ್ವಾತಂತ್ಯ್ರವನ್ನು ಜಿಲ್ಲಾಡಳಿತ ಹಾಗೂ ಪೊಲೀಸರ ಅಧೀನಕ್ಕೆ ನೀಡಿದಂತೆ ಆಗುತ್ತದೆ. ದಾಖಲೆಗಳನ್ನು ಗಮನಿಸಿದಾಗ ಸಾಕ್ಷ್ಯವನ್ನು ಸೃಷ್ಟಿ ಮಾಡಲು ಯತ್ನ ನಡೆಸಿದಂತೆ ಕಾಣುತ್ತದೆ. ಈ ಆರೋಪಿಗಳ ಪೈಕಿ ಯಾರಿಗೂ ಕ್ರಿಮಿನಲ್ ಹಿನ್ನಲೆಗಳು ಇಲ್ಲ. ಅವರ ಮೇಲೆ ಹೊರಿಸಲಾಗಿರುವ ಆರೋಪ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ನೀಡುವಂತಹ ಆರೋಪಗಳು ಅಲ್ಲ. ಆ ಹಿನ್ನಲೆಯಲ್ಲಿ ಅರ್ಜಿದಾರರ ಹಕ್ಕುಗಳನ್ನು ರಕ್ಷಣೆ ಮಾಡಲು ಜಾಮೀನು ನೀಡುವುದು ಅತ್ಯಗತ್ಯ ಎಂದು ನ್ಯಾಯಪೀಠ ಹೇಳಿದೆ.
"ತನಿಖಾ ಸಂಸ್ಥೆ ಸಂಗ್ರಹ ಮಾಡಿರುವ ದಾಖಲೆಗಳಲ್ಲಿ ಯಾವುದೇ ಖಚಿತ ಸಾಕ್ಷಿಯಿಲ್ಲ. ಯಾವೊಬ್ಬ ಅರ್ಜಿದಾರನು ಘಟನಾ ಸ್ಥಳದಲ್ಲಿ ಇರಲಿಲ್ಲ. ಹಾಗೆಯೇ ಸುಮಾರು 1,500 ರಿಂದ 2,000 ಮುಸ್ಲಿಮರ ಗುಂಪು ಕಲ್ಲು, ಗಾಜಿನ ತುಂಡು ಹಾಗೂ ಸೋಡಾ ಬಾಟಲ್ಗಳನ್ನು ಹೊಂದಿತ್ತು ಎಂದು ಆರೋಪ ಮಾಡಲಾಗಿದೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಛಾಯಾಚಿತ್ರಗಳಲ್ಲಿ ಓರ್ವ ವ್ಯಕ್ತಿಯ ಕೈಯಲ್ಲಿ ಬಾಟಲಿ ಇರುವುದು ಬಿಟ್ಟರೆ ಬೇರೆ ಯಾರ ಬಳಿಯೂ ಯಾವುದೇ ಅಸ್ತ್ರವಿಲ್ಲ. ಅವುಗಳಲ್ಲಿ ಜನರ ಸುತ್ತ ಪೊಲೀಸರು ಇದ್ದ ಸುಳಿವು ಕೂಡಾ ಕಾಣಿಸುವುದಿಲ್ಲ" ಎಂದು ತಿಳಿಸಿದೆ.
"ಅಷ್ಟು ಮಾತ್ರವಲ್ಲದೆ ಅರ್ಜಿದಾರ ಸಲ್ಲಿಸಿರುವ ಫೋಟೋಗಳಲ್ಲಿ ಪೊಲೀಸರೇ ಜನರತ್ತ ಕಲ್ಲು ತೂರಾಟ ಮಾಡುತ್ತಿರುವುದು ಕಂಡು ಬರುತ್ತದೆ. ಅದನ್ನು ಪಕ್ಕಕ್ಕಿಟ್ಟರೂ ದೂರುದಾರರು ಪೊಲೀಸರ ವಿರುದ್ಧ ದೂರು ನೀಡಿದರೂ ಅವುಗಳನ್ನು ಸ್ವೀಕಾರ ಮಾಡಿ ನಿಯಮದಂತೆ ಎಫ್ಐಆರ್ ದಾಖಲು ಮಾಡಿಲ್ಲ. ಪೊಲೀಸರು ಎಫ್ಐಆರ್ ದಾಖಲು ಮಾಡದಿರುವುದು ನೋಡಿದಾಗ ಪೊಲೀಸರ ಕೃತ್ಯಗಳನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಅನಿಸುತ್ತದೆ. ಪೊಲೀಸರು ತಮ್ಮ ಮನಸ್ಸಿಗೆ ಬಂದಂತೆ ಅಮಾಯಕ ಜನರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ" ಎಂದು ನ್ಯಾಯಾಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
"ಜಾಮೀನು ನೀಡಿದಲ್ಲಿ ಈ ಆರೋಪಿಗಳು ಸಂಘಟನೆಗಳಿಗೆ ಸೇರಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ" ಎಂದು ಪ್ರಾಸಿಕ್ಯೂಷನ್ ವಾದ ಮಾಡಿತು. ಆದರೆ ಇದನ್ನು ನ್ಯಾಯಾಪೀಠ ಮಾನ್ಯ ಮಾಡಲಿಲ್ಲ.