ಚೆನ್ನೈ, ಫೆ 20 (Daijiworld News/MB) : ಬೆಂಗಳೂರಿನಿಂದ ಹೊರಟಿದ್ದ ಕೇರಳ ರಾಜ್ಯ ಸರ್ಕಾರಿ ಬಸ್ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಸುಮಾರು 20 ಜನರು ಮೃತಪಟ್ಟಿರುವ ಘಟನೆ ಗುರುವಾರ ತಮಿಳುನಾಡಿನ ತಿರ್ಪೂರು ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ನಡೆದಿದೆ.
ಈ ಅಪಘಾತ ಕೊಯಮತ್ತೂರು-ಸೇಲಂ ಹೆದ್ದಾರಿಯಲ್ಲಿ ಮುಂಜಾನೆ 4.30ರ ಸುಮಾರಿಗೆ ನಡೆದಿದ್ದು ಬಸ್ ಬೆಂಗಳೂರಿನಿಂದ ಕೇರಳದ ಎರ್ನಾಕುಳಂಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ತಿರ್ಪೂರು ಜಿಲ್ಲೆಯ ಅಧಿಕಾರಿಗಳು, ಬಸ್ಸಿನಲ್ಲಿದ್ದ 48 ಪ್ರಯಾಣಿಕರ ಪೈಕಿ 19 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುಂದುಗಡೆಯಿಂದ ಬರುತ್ತಿದ್ದ ಲಾರಿಯ ಟೈಯರ್ ಸ್ಫೋಟಗೊಂಡ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವೋಲ್ವೊ ಬಸ್ಗೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ.
ಅವಿನಾಶಿಯ ಉಪ ತಹಶೀಲ್ದಾರ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, "14 ಮಂದಿ ಪುರುಷರು ಹಾಗೂ 5 ಮಂದಿ ಮಹಿಳೆಯರು ಕೇರಳ ರಾಜ್ಯದ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಪಘಾತಕ್ಕೀಡಾದವರಿಗೆ ತುರ್ತು ವೈದ್ಯಕೀಯ ಸೌಲಭ್ಯ ನೀಡುವಂತೆ ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು ಮೃತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.
ಡಿಕ್ಕಿಯ ರಭಸಕ್ಕೆ ಬಸ್ಸಿನ ಒಂದು ಮಗ್ಗುಲು ಸಂಪೂರ್ಣ ನಜ್ಜುಗುಜ್ಜಾಗಿದ್ದು ಈ ಭೀಕರ ಅಪಘಾತದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನರು ಶೇರ್ ಮಾಡುತ್ತಿದ್ದಾರೆ.
ಸದ್ಯ 20 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಿರ್ಪೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಐವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 48 ಜನರಲ್ಲಿ ಬಹುತೇಕರು ಕೇರಳದವರು ಎಂದು ತಿಳಿದುಬಂದಿದೆ.
ಅಪಘಾತದ ಕುರಿತಾಗಿ ಯಾವುದೇ ಮಾಹಿತಿಗಾಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸ್ನೇಹಿತರು ಮತ್ತು ಸಂಬಂಧಿಕರಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು, (0) 7708331194 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಕೆ. ವಿಜಯ್ ತಿಳಿಸಿದ್ದಾರೆ.