ಹೈದರಾಬಾದ್, ಫೆ.20 (DaijiworldNews/PY): "ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶೀಘ್ರದಲ್ಲೇ ಭಾರತದ ಪೌರತ್ವವನ್ನು ಕಳೆದುಕೊಳ್ಳಲಿದ್ದಾರೆ" ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಗೃಹ ಸಚಿವ ಅಮಿತ್ ಶಾ ಅವರ ಮೇಜಿನ ಮೇಲೆ ಇವರ ದಾಖಲೆಗಳಿವೆ, ಶೀಘ್ರವೇ ಇವರು ಪೌರತ್ವವನ್ನು ಕಳೆದುಕೊಳ್ಳುತ್ತಾರೆ" ಎಂದು ಹೇಳಿದರು.
"ಭಾರತೀಯ ಸಂವಿಧಾನವನ್ನು ಉಲ್ಲೇಖಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು, ಭಾರತೀಯ ಪ್ರಜೆಯಾಗಿರುವಾಗ ಬೇರೆ ದೇಶದ ಪೌರತ್ವವನ್ನು ತೆಗೆದುಕೊಳ್ಳುವ ಜನರು ಸ್ವಯಂಚಾಲಿತವಾಗಿ ತಮ್ಮ ಭಾರತೀಯ ಪೌರತ್ವವನ್ನು ಕಳೆದುಕೊಳ್ಳುತ್ತಾರೆ" ಎಂದು ತಿಳಿಸಿದರು.
"ರಾಹುಲ್ ಗಾಂಧಿ ಇಂಗ್ಲೆಂಡ್ನಲ್ಲಿ ವ್ಯವಹಾರ ಪ್ರಾರಂಭಿಸಲು ಬ್ರಿಟಿಷ್ ಪೌರತ್ವವನ್ನು ಆರಿಸಿಕೊಂಡಿದ್ದಾರೆ. ಆದರೆ ಅವರ ತಂದೆ ರಾಜೀವ್ ಗಾಂಧಿ ಭಾರತೀಯರಾಗಿದ್ದರಿಂದ ರಾಹುಲ್ ಗಾಂಧಿ ಅವರು ಭಾರತೀಯರೆಂದು ಸಾಬೀತು ಪಡಿಸಬಹುದು ಆದರೆ, ಕಾಂಗ್ರೆಸ್ ನಾಯಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಭಾರತೀಯರೆಂದು ಸಾಬೀತು ಪಡಿಸಲು ಸಾಧ್ಯವಿಲ್ಲ ಏಕೆಂದರೆ ಅವರು ಭಾರತೀಯರಲ್ಲ" ಎಂದರು.
ಸಿಎಎ ಕುರಿತು ಮಾತನಾಡಿದ ಅವರು, "ಸಿಎಎ ಸರಿಯಾಗಿ ಅರ್ಥವಾಗುತ್ತಿಲ್ಲ. ಅಲ್ಲದೇ ಇದನ್ನು ವಿರೋಧಿಸುವವರು ಸಿಎಎ ಬಗ್ಗೆ ಸ್ವತಃ ತಿಳಿದುಕೊಂಡಿಲ್ಲ. ಸಿಎಎ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಬರುವ ಮುಸ್ಲಿಮರಿಗೆ ಪೌರತ್ವ ನೀಡಬೇಕು ಎನ್ನುವುದು ಹಾಸ್ಯಾಸ್ಪದವಾಗಿದೆ" ಎಂದರು.
"ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದ ಪಾರಾಗಲು ಎಲ್ಲಿಯೂ ಹೋಗಹುವುದಿಲ್ಲ ಬದಲಾಗಿ ಭಾರತದಲ್ಲೇ ಉಳಿದುಕೊಳ್ಳುತ್ತಾರೆ. ಆದರೆ, ಅವರಿಗೆ ಪೌರತ್ವ ನೀಡಿದರೆ ಬೇರೆಯವರಿಗೆ ಯಾಕೆ ಸಮಸ್ಯೆ" ಎಂದು ಕೇಳಿದರು.