ಬೆಂಗಳೂರು, ಫೆ.20 (DaijiworldNews/PY): "ನೀವು ಮುಂಬೈ ಮೂಲದವರಾಗಿದ್ದೀರಿ, ನಿಮಗೆ ಕನ್ನಡ ಸರಿಯಾಗಿ ಬರುತ್ತಾ" ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾಣ್ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಗುರುವಾರ ಸದನದಲ್ಲಿ ಪ್ರವಾಹ ವಿಚಾರವಾಗಿ ಮಾತನಾಡುತ್ತಿರುವ ಸಂದರ್ಭ ಸಿದ್ದರಾಮಯ್ಯ ಅವರು, "ನಿಮಗೆ ಕನ್ನಡ ಸರಿಯಾಗಿ ಬರುತ್ತಾ. ನೀವು ಮುಂಬೈ ಮೂಲದವರಾಗಿದ್ದೀರಿ" ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಪ್ರಭು ಚೌಹ್ಹಾಣ್ ಅವರು, "ಸದನಕ್ಕೆ ನೀವು ತಪ್ಪಾದ ಮಾಹಿತಿ ನೀಡುತ್ತಿದ್ದೀರಿ, ನಾನು ಕರ್ನಾಟಕ್ನವನು" ಎಂದು ಹೇಳಿದರು.
ಪ್ರಭು ಚೌಹ್ಹಾಣ್ ಅವರು ಉತ್ತರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ಅದು ಕರ್ನಾಟಕ್ ಅಲ್ಲ ಕರ್ನಾಟಕ. ಯಾರಾದರೂ ಕನ್ನಡ ಮಾತನಾಡುವಾಗ ಕರ್ನಾಟಕ್ ಎಂದು ಹೇಳುತ್ತೇವಾ. ಈ ಹಿಂದೆ ಪರಿಶೀಲನಾ ಸಭೆಯ ಸಲುವಾಗಿ ಬೀದರ್ಗೆ ಹೋಗಿದ್ದೆ. ಅ ಸಂದರ್ಭ ಸಭೆಯಲ್ಲಿ ಪ್ರಭು ಚೌಹ್ಹಾಣ್ ಅವರು ಎಲ್ಲಾ ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡಿದ್ದರು" ಎಂದು ತಿಳಿಸಿದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, "ಈ ಹಿಂದೆ ಲೋಕಸಭೆಯಲ್ಲಿ ಸದಸ್ಯರೊಬ್ಬರು ಒಂದು ಗಂಟೆಗಳ ಕಾಲ ಇಂಗ್ಲೀಷ್ನಲ್ಲಿ ಮಾತನಾಡಿದ್ದರು. ಭಾಷಣದ ಬಳಿಕ ಮಧು ದಂಡಾವತಿಯವರು ಭಾಷಣದ ಇಂಗ್ಲಿಷ್ ಭಾಷಾಂತರ ಬೇಕು" ಎಂದು ಕೇಳಿದ್ದರು ಎಂದು ಕಾಲೆಳೆದರು.