ನವದೆಹಲಿ, ಫೆ 20 (Daijiworld News/MB) : ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾರ್ಚ್ 3ರ ಬೆಳಿಗ್ಗೆ ಗಲ್ಲು ಶಿಕ್ಷೆ ಜಾರಿಗೆ ದೆಹಲಿ ಕೋರ್ಟ್ ಸೋಮವಾರ ತೀರ್ಪು ನೀಡಿದ ಬೆನ್ನಲ್ಲೇ ಅಪರಾಧಿಗಳಲ್ಲೊಬ್ಬನಾದ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡಿದ್ದಾನೆ.
ಅಪರಾಧಿಯ ತಲೆ ಮತ್ತು ಕೈಗೆ ಸಣ್ಣಪುಟ್ಟ ಗಾಯವಾಗಿದ್ದು, ಜೈಲಿನ ಅಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ ಎಂದು ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಕುಮಾರ್ಸಿಂಗ್ (32), ಪವನ್ ಗುಪ್ತಾ (25), ವಿನಯ್ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅವರನ್ನು ಗಲ್ಲಿಗೇರಿಸುವಂತೆ ಆದೇಶಿಸಿದ್ದರು.
ಅಪರಾಧಿ ವಿನಯ್ ಪರ ವಕೀಲ ಎ.ಪಿ.ಸಿಂಗ್, "ಅಪರಾಧಿ ವಿನಯ್ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಈ ಬಗ್ಗೆ ತಿಹಾರ್ ಜೈಲು ಪ್ರಾಧಿಕಾರದಿಂದ ವರದಿಯನ್ನು ತರಿಸಿಕೊಳ್ಳಬಹುದು. ಅಕ್ಷಯ್ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ ವಜಾ ಆಗಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಲು ಆತ ಬಯಸಿದ್ದಾನೆ ಎಂದು ಹೇಳಿದ್ದರು.
ಆದರೆ, ಸುಪ್ರೀಂ ಕೋರ್ಟ್ ವಿನಯ್ ಮಾನಸಿಕ ಅಸ್ವಸ್ಥ ಎಂಬ ವಾದವನ್ನು ತಳ್ಳಿ ಹಾಕಿದೆ. ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅಕ್ಷಯ್ ಸಿದ್ಧತೆ ನಡೆಸುತ್ತಿದ್ದಾನೆ ಎಂಬುದು ಮರಣ ದಂಡನೆ ಜಾರಿ ಮುಂದೂಡಲು ಕಾರಣವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿ ತಿರಸ್ಕಾರ ಮಾಡಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಫೆ.14ರಂದು ತಿರಸ್ಕಾರ ಮಾಡಿತ್ತು.
2015ರಲ್ಲಿಯೇ ಆರು ಜನ ಅಪರಾಧಿಗಳಲ್ಲಿ ಓರ್ವ ಬಾಲಾಪರಾಧಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.