ಯಾದಗಿರಿ, ಫೆ.20 (DaijiworldNews/PY): "ನಾವೀಗ ಆಪರೇಷನ್ ಕಮಲ ನಿಲ್ಲಿಸಿದ್ದರೂ, ಬಾಗಿಲು ತೆರೆದೇ ಇದೆ. ಯಾರೇ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ಕೊಟ್ಟು ಬಂದರೂ ಸ್ವಾಗತವಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗುರುವಾರ ಯಾದಗಿರಿಯಲ್ಲಿ ಮಾತನಾಡಿದ ಅವರು, "ನಾವೀಗ ಆಪರೇಷನ್ ಕಮಲ ನಿಲ್ಲಿಸಿದ್ದರೂ, ಬಾಗಿಲು ತೆರೆದೇ ಇದೆ. ಯಾರೇ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ಕೊಟ್ಟು ಬಂದರೂ ಸ್ವಾಗತವಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಾವು ಯಾರನ್ನೂ ಕರೆಯುವುದಿಲ್ಲ. ಆದರೆ, ಅವರಾಗೇ ಪಕ್ಷಕ್ಕೆ ಸೇರ್ಪಡೆಯಾದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಹಾಗೂ ಜೆಡಿಎಸ್ಗಿಂತ ಅಧಿಕ ಜನಾದೇಶ ಬಿಜೆಪಿಗಿದೆ" ಎಂದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಬಿಜೆಪಿ ಶಾಸಕ ಉಮೇಶ್ ಕತ್ತಿ ಭೇಟಿಯಾಗಿರುವ ವಿಚಾರದ ಬಗ್ಗೆ ತಿಳಿಸಿದ ನಳಿನ್ ಕುಮಾರ್, "ಇವೆಲ್ಲ ಊಹಾಪೋಹಗಳು. ರಾಜ್ಯದಲ್ಲಿ ನಮ್ಮ ಸರ್ಕಾರ 3 ವರ್ಷ ಸುಭದ್ರವಾಗಿರಲಿದೆ" ಎಂದು ತಿಳಿಸಿದರು.
"ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ ಎಂದು ಹತ್ತಾರು ಜನರನ್ನು ಬಂಧಿಸಿದ್ದರು. ಅದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೇ? ಯಾರು ಗನ್ ತೋರಿಸಿದ್ದಾರೋ, ಯಾರು ಕಲ್ಲು ಹೊಡೆದಿದ್ದಾರೋ, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿದ್ದಾರೋ? ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಕವನ ಓದಿದವರನ್ನೆಲ್ಲ ನಾವು ಬಂಧಿಸಿಲ್ಲ. ರಾಷ್ಟ್ರ ವಿರೋಧಿ ಹೇಳಿಕೆ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಯಾದಗಿರಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಝೀರೋ ಟ್ರಾಫಿಕ್ ನೀಡಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಳಿನ್ ಕುಮಾರ್ಗೆ ಝೀರೋ ಟ್ರಾಫಿಕ್ ನೀಡಿ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.