ರಾಂಚಿ, ಫೆ.20 (DaijiworldNews/PY): "ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಬೇರೆಯೇ ಶಬ್ದವನ್ನು ಬಳಸುವುದು ಯೋಗ್ಯ" ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಗುರುವಾರ ಜಾರ್ಖಂಡ್ನ ರಾಂಚಿಯಲ್ಲಿ ಆರ್ ಎಸ್ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ಇತ್ತೀಚೆಗೆ ಇಂಗ್ಲೇಡ್ಗೆ ಹೋಗಿದ್ದ ಸಂದರ್ಭ ಅಲ್ಲಿನ ಕಾರ್ಯಕರ್ತರೊಬ್ಬರು ಇಂಗ್ಲಿಷ್ನಲ್ಲಿ ಕೆಲವೊಂದು ಶಬ್ದಗಳು ಸಾಂಪ್ರದಾಯಿಕವಾಗಿ ಏನು ಅರ್ಥ ನೀಡುತ್ತವೆ ಅದಕ್ಕೆ ತಕ್ಕಂತೆ ಉಳಿದಿಲ್ಲ ಎಂದು ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆ ಎಂಬ ಪದವನ್ನು ನಾಜಿ ಅಥವಾ ಫ್ಯಾಸಿಸ್ಟ್ ಸಿದ್ದಾಂತದೊಂದಿಗೆ ಹೋಲಿಸಲಾಗುತ್ತಿದ್ದು, ವಿಶ್ವದಾತ್ಯಂತ ರಾಷ್ಟ್ರೀಯತೆ ಎಂಬ ಪದವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.
ರಾಷ್ಟ್ರ ಹಾಗೂ ರಾಷ್ಟ್ರೀಯ ಎಂಬ ಪದ ಬಳಸಿ. ಆದರೆ ರಾಷ್ಟ್ರೀಯತೆ ಎಂಬ ಪದವನ್ನು ಬಳಸಬೇಡಿ ಎಂದು ಅಲ್ಲಿದ್ದವರು ಹೇಳಿದರು. ಇದು ನಾಜಿಸಂ, ಫ್ಯಾಸಿಸಂ, ಹಿಟ್ಲರ್ ಇತರ ಪದಗಳ ಜೊತೆ ಹೋಲಿಕೆ ಮಾಡಲಾಗುತ್ತಿದ್ದು, ಈ ಪದವು ಬೇರೆ ಅರ್ಥವನ್ನು ಕೊಡುತ್ತಿದೆ ಎಂದು ಹೇಳಿದರು.
"ಭಾರತವನ್ನು ವಿಶ್ವದಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಮಾಡುವ ಕಾಲ ಬಂದಿದೆ. ನಮ್ಮ ದೇಶವನ್ನು ಇಡೀ ವಿಶ್ವದಲ್ಲಿ ಉತ್ತಮ ರಾಷ್ಟ್ರವನ್ನಾಗಿ ಮಾಡಬೇಕು. ವಿಶ್ವದರ್ಜೆಯ ರಾಷ್ಟ್ರವಾಗಬೇಕು. ಬಹುತೇಕ ರಾಷ್ಟ್ರಗಳು ತನ್ನ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವಂತೆ ಭಾರತ ತನ್ನ ಶಕ್ತಿಯನ್ನು ಅನ್ಯಮಾರ್ಗಕ್ಕೆ ಬಳಸಿಕೊಳ್ಳದೇ ಉತ್ತಮ ಮಾರ್ಗಕ್ಕೆ ಉಪಯೋಗಿಸುತ್ತದೆ" ಎಂದರು.