ಅಹಮದಾಬಾದ್, ಫೆ 20 (Daijiworld News/MB) : "ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹಮದಾಬಾದ್ ರೋಡ್ ಶೋನಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ" ಎಂದು ಇಲ್ಲಿನ ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಮೊದಲು ಟ್ರಂಪ್ ಅವರನ್ನು ಸ್ವಾಗತ ಮಾಡಲು ಸುಮಾರು 70 ಲಕ್ಷ ಜನರು ರೋಡ್ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಸುದ್ದಿಯಾಗಿತ್ತು. ಟ್ರಂಪ್ ಅವರು ಕೂಡಾ ಈ ಮಾತನ್ನೇ ಹೇಳಿದ್ದರು. ಈ ಹಿನ್ನಲೆಯ್ಲಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು "ರೋಡ್ ಶೋನಲ್ಲಿ 70 ಲಕ್ಷ ಜನರು ಭಾಗವಹಿಸುವುದಲ್ಲ, ಒಂದು ಲಕ್ಷ ಜನರು ಭಾಗವಹಿಸುತ್ತಾರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಸಭೆ ಕಮಿಷನರ್ ವಿಜಯ್ ನೆಹ್ರಾ ಅವರು, "ಫೆ. 24ರಂದು ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ನಲ್ಲಿ ರೋಡ್ ಶೋ ನಡೆಸಲಿದ್ದಾರೆ. 22 ಕಿ.ಮೀ ದೂರದ ಈ ರೋಡ್ ಶೋನಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ" ಎಂದು ಹೇಳಿದ್ದಾರೆ.
ರೋಡ್ ಶೋ ಸಬರಮತಿ ಆಶ್ರಮದಿಂದ ಮೊಟೇರಾ ಸರ್ದಾರ್ ವಲ್ಲಭ ಭಾಯ್ ಕ್ರಿಕೆಟ್ ಸ್ಟೇಡಿಯಂವರೆಗೆ ನಡೆಯಲಿದೆ. ಆ ಬಳಿಕ ಮೊಟೇರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಜರುಗಲಿದೆ.