ಕೊಪ್ಪಳ, ಫೆ 20 (Daijiworld News/MB) : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳೂರು ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದು ನ್ಯಾಯಾಂಗ ತನಿಖೆ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದರು.
ಕೊಪ್ಪಳದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, "ಈ ಗಲಭೆಯ ಹಿಂದೆ ಯಾರಿದ್ದಾರೆ ಎಂದು ತನಿಖೆ ಮಾಡಲಾಗುತ್ತಿದೆ. ಅಲ್ಲಿನ ಸಂಘಟನೆಯವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತಾಗಿ ಕೆಲವು ಸಿಸಿ ಟಿವಿ ವಿಡಿಯೋ ಲಭ್ಯವಾಗಿದೆ. ಇಲ್ಲಿ ಪೊಲೀಸ್ ಇಲಾಖೆಯ ಯಾವುದೇ ತಪ್ಪಿಲ್ಲ. ಈಗಾಗಲೇ ಈ ಪ್ರಕರಣದ ಬಗ್ಗೆ ಗೃಹ ಸಚಿವರು ಸದನದಲ್ಲಿ ಉತ್ತರಿಸಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆ ನಡೆಸುವ ಯಾವುದೇ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮೇಲೆ ಈ ಸಂಘಟನೆಯಿಂದ ದಾಳಿಗಳಾಗಿವೆ. ನೆರೆ ಹಾನಿಯಾಗಿರುವ ಬಗ್ಗೆ ಸದನದಲ್ಲಿ ಧ್ವನಿ ಎತ್ತುವ ಬದಲಾಗಿ ಕಲಾಪ ಬಹಿಷ್ಕಾರ ಮಾಡಿ ಕಾಲಹರಣ ಮಾಡುತ್ತಿವೆ ಎಂದು ಆರೋಪ ಮಾಡಿದರು.
ಹಾಗೆಯೇ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಹಿಂದೆ ಯಾರು ಇದ್ದಾರೆ ಎಂದು ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಅವರನ್ನು ಬಂಧಿಸಿ ಬಿಡುಗಡೆ ಮಾಡಿ ಮತ್ತೆ ಬಂಧಿಸಿದ್ದಾರೆ. ಕೆಲವು ವಿಚಾರಣೆ ಸಂದರ್ಭದಲ್ಲಿ ಈ ರೀತಿ ನಡೆಯುತ್ತವೆ ಎಂದು ಹೇಳಿದರು.
ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಆರ್. ಅಶೋಕ್ ಅವರ ಪುತ್ರ ಇಲ್ಲ. ಹೆಚ್ಚಿನ ಮಾಹಿತಿ ನನಗೆ ತಿಳಿದಿಲ್ಲ ಎಂದರು.