ಬೆಂಗಳೂರು, ಫೆ 20 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಘಟನೆ ಇಲ್ಲಿನ ಫ್ರೀಡಂಪಾರ್ಕ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಘೋಷಣೆ ಕೂಗಿದ ಹೋರಾಟಗಾರ್ತಿ ಅಮೂಲ್ಯರನ್ನು ವಶಕ್ಕೆ ಪಡೆದುಕೊಂಡಿದೆ.
ಇಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಂಸದ ಒವೈಸಿ ಸೇರಿದಂತೆ ಹಲವಾರು ಸಿಎಎ ವಿರೋಧಿ ಹೋರಾಟಗಾರರು ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಮಾತು ಆರಂಭಿಸಿದ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂಬುವುದಾಗಿ ನಾಲ್ಕಾರು ಬಾರಿ ಘೋಷಣೆಗಳನ್ನು ಕೂಗಿದ್ದಾಳೆ.
ತಕ್ಷಣ ಅಲರ್ಟ್ ಆದ ಆಯೋಜಕರು ಹಾಗೂ ಪೊಲೀಸರು ಆಕೆಯ ಕೈಯಿಂದ ಮೈಕ್ ಕಸಿದುಕೊಂಡು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಈಕೆ ಕೊಪ್ಪಳ ಮೂಲದವಳಾಗಿದ್ದು, ಇತ್ತೀಚಿಗೆ ಸಿಎ ಎ ವಿರುದ್ಧದ ಹೋರಾಟಗಳ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದಳು ಎನ್ನಲಾಗಿದೆ.