ಚಿತ್ರದುರ್ಗ, ಫೆ.20 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅಕ್ಷರಶಃ ಸೂತ್ರದ ಗೊಂಬೆ. ಅವರನ್ನು ತಲೆ ಮೇಲೆ ಹೊತ್ತು ಕುಣಿಯುತ್ತಿರುವ ದೇಶವಾಸಿಗಳೇ ಅವರ ಗೋರಿ ಕಟ್ಟುತ್ತಾರೆ" ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.
ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ 18 ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಮೋದಿಯವರನ್ನು ತಲೆ ಮೇಲೆ ಹೊತ್ತು ಕುಣಿಯುತ್ತಿರುಚ ದೇಶವಾಸಿಗಳೇ ಅವರ ಗೋರಿ ಕಟ್ಟುತ್ತಾರೆ. ಇತಿಹಾಸ ಚಲನಶೀಲವಾಗಿದ್ದು, ಶೀಘ್ರವೇ ಪುನರಾವರ್ತನೆಯಾಗುತ್ತದೆ" ಎಂದರು.
"ಅಮಿತ್ ಶಾ, ಅಂಬಾನಿ ಹಾಗೂ ಅದಾನಿಯ ರಕ್ಷಣೆಯಲ್ಲಿ ಮೋದಿ ಬದುಕುತ್ತಿದ್ದಾರೆ. ಅವರು ಅಕ್ಷರಹಃ ಸೂತ್ರದ ಗೊಂಬೆ. ಈ ಗೊಂಬೆಯನ್ನು ಕುಣಿಸುತ್ತಿದ್ದಾರೆ. ತ್ರಿವಳಿ ತಲಾಖ್, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂಪಡೆದಿದ್ದಕ್ಕೆ ಬೆಂಬಲವಿದೆ. ಆದರೆ, ಮಾನವ ವಿರೋಧಿಯಾಗಿರುವ ಸಿಎಎ ಹಾಗೂ ಎನ್ಆರ್ಸಿಗೆ ಬೆಂಬಲವಿಲ್ಲ. ನೀವು ಕೇಳುವ ದಾಖಲೆಗಳನ್ನು ಒದಗಿಸಲು ಆಗುವುದಿಲ್ಲ" ಎಂದು ಹೇಳಿದರು.
"ಮೋದಿಯವರನ್ನು ಇನ್ನೊಂದು ಬಾರಿ ಗೆಲ್ಲಿಸಿದರೆ ಎಲ್ಲರ ಸಮಾಧಿ ಕಟ್ಟುತ್ತಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಂದ ಮುಚ್ಚಿಡಲು ಕೊಳಚೆ ಪ್ರದೇಶಗಳಿಗೆ ಗೋಡೆ ನಿರ್ಮಿಸಲಾಗುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹಸಿದವರು ಊಟ ಕೇಳುತ್ತಾರೆ ಬದಲಾಗಿ ಭಜನೆ ಮಾಡುವುದಿಲ್ಲ" ಎಂದು ತಿಳಿಸಿದರು.
"ಸಿರಾಜ್ ಬಿಸರಳ್ಳಿ ಅವರು ಸಿಎಎ ವಿರೋಧಿಸಿ ರಚಿಸಿದ ಕವನ ಸರಿಯಾಗಿದೆ. ತನಗನಿಸಿದ್ದನ್ನು ಬರೆದ ಸಿರಾಜ್ ಕವಿ, ಗಾಲಿಬ್ ಅಲ್ಲ. ಸಿರಾಜ್ ವಿರುದ್ದ ಪ್ರಕರಣ ದಾಖಲಿಸಿ ಸಿಎಂ ಬಿಎಸ್ವೈ ಅವರ ಮೂರ್ಖತನ ತೋರಿಸಿಕೊಂಡಿದ್ದಾರೆ" ಎಂದರು.