ಬೆಂಗಳೂರು, ಫೆ.21 (DaijiworldNews/PY): "15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಪ್ರತಿ ವರ್ಷ ರಾಜ್ಯಕ್ಕೆ 11 ಸಾವಿರ ಕೋಟಿ ರೂ. ಅನುದಾನ ಕಡಿತವಾಗಲಿದೆ. ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಕಡಿತ ಮಾಡಿದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, "ತೆರಿಗೆ ನೀಡುವ ಮೂರನೇ ದೊಡ್ಡ ರಾಜ್ಯ ಕರ್ನಾಟಕ. ರಾಜ್ಯದಿಂದ ಕೇಂದ್ರಕ್ಕೆ 1 ರೂ. ತೆರಿಗೆ ನೀಡಿದರೆ ಕೇಂದ್ರವು ರಾಜ್ಯಕ್ಕೆ ಕೇವಲ 42 ಪೈಸೆ ವಾಪಸ್ ಕೊಡುತ್ತದೆ. ಆದರೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅಧಿಕ ಅನುದಾನ ನೀಡುತ್ತದೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಪರಿಣಾಮ ಬೀರುತ್ತದೆ. ಕೇಂದ್ರ ಸರಕಾರವು ಅವಸರದಲ್ಲಿ ಜಿಎಸ್ಟಿ ಜಾರಿಗೊಳಿಸಿರುವುದು ಹಾಗೂ ನಗದು ಅಪಮೌಲ್ಯಗೊಳಿಸಿರುವುದೇ ಈ ತಾರತಮ್ಯಕ್ಕೆ ಕಾರಣ" ಎಂದರು.
"ಐದು ವರ್ಷಗಳಲ್ಲಿ ಸುಮಾರು 50 ಸಾವಿರ ಕೋ. ರೂ. ಅನುದಾನ ಕಡಿತವಾಗಲಿದೆ. ಕೇಂದ್ರದ ಈ ತೀರ್ಮಾನವನ್ನು ಪಕ್ಷಭೇದ ಮರೆತು ವಿರೋಧಿಸಿ ರಾಜ್ಯದ ಪಾಲಿನ ಅನುದಾನ ಪಡೆಯಲು ಪ್ರಯತ್ನಿಸಬೇಕು" ಎಂದು ಹೇಳಿದರು.