ಬೆಂಗಳೂರು, ಫೆ.21 (DaijiworldNews/PY): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಘಟನೆ ಇಲ್ಲಿನ ಫ್ರೀಡಂಪಾರ್ಕ್ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಘೋಷಣೆ ಕೂಗಿದ ಹೋರಾಟಗಾರ್ತಿ ಅಮೂಲ್ಯರನ್ನು ವಶಕ್ಕೆ ಪಡೆದುಕೊಂಡಿದ್ದು, ಅಮೂಲ್ಯರಿಗೆ ಫೆ.23 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿದ್ಯಾರ್ಥಿಯ ಕೃತ್ಯವನ್ನು ಖಂಡಿಸಿದ ಬಿಜೆಪಿ, ದೇಶದ್ರೋಹಿಗಳು ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಫೆ.20 ಗುರುವಾರ ರಾತ್ರಿ ಚಿಕಮಗಳೂರಿನಲ್ಲಿ ಅಮೂಲ್ಯಾರ ತಂದೆಯನ್ನು ಹಿಂದೂ ಪರ ಕಾರ್ಯಕರ್ತರು ಪ್ರಶ್ನಿಸಿದ್ದು ಈ ಸಂದರ್ಭ ಅವರು, ನನ್ನ ಮಗಳು ಮಾಡಿದ್ದು ತಪ್ಪು. ಪೊಲೀಸರು ಅವಳ ಕೈ-ಕಾಲು ಮುರಿಯಲಿ ಎಂದಿದ್ದಾರೆ.
ಪುತ್ರಿಯ ದೇಶದ್ರೋಹಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಾಜೀದ್ ಅವರು, ನನ್ನ ಮಗಳು ಮಾಡಿದ್ದನ್ನು ಕಂಡಿತ ಒಪ್ಪಿಕೊಳ್ಳುವುದಿಲ್ಲ. ಆಕೆ ಬೇಲ್ ಮೇಲೆ ಹೊರಗೆ ಬರುವುದು ಬೇಡ. 6 ತಿಂಗಳು ಜೈಲಿನಲ್ಲೇ ಇರಲಿ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷರಶಃ ತಪ್ಪು. ಮಗಳ ನಡೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ಕೇಳುತ್ತಿರಲಿಲ್ಲ. ಪೊಲೀಸರು ಆಕೆಯನ್ನು ಹೊರಗೆ ಬಿಡುವುದು ಬೇಡ. ನಾನು ಆಕೆಗೆ ಬೇಲ್ ಕೊಡಿಸುವುದಿಲ್ಲ, ಜೈಲಿನಲ್ಲೇ ಇರಲಿ. ಮಗಳ ಪರ ವಾದ ಮಾಡಲು ವಕೀಲರನ್ನು ನೇಮಕ ಮಾಡುವುದಿಲ್ಲ. ಸದ್ಯಕ್ಕೆ ಅವಳನ್ನು ಮನೆಗೂ ಸೇರಿಸುವುದಿಲ್ಲ. ಮಗಳ ವಿರುದ್ಧ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನದು ಏನು ಅಭ್ಯಂತರವಿಲ್ಲ ಎಂದು ಹೇಳಿದರು.
ಈ ಮಧ್ಯೆ, ಅಮೂಲ್ಯಾರ ವಿರುದ್ದ ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಹಾಗೂ ಸುಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಬಿ ರಮೇಶ್ ತಿಳಿಸಿದ್ದಾರೆ.