ಬೆಂಗಳೂರು, ಫೆ.21 (DaijiworldNews/PY): ಯಾವುದೇ ಮಹಾಪುರುಷರ ವಿಚಾರಧಾರೆಗಳು ಕೇವಲ ಜಾತಿಗೆ ಸೀಮಿತವಾಗಿ ಉಳಿಯಬಾರದು. ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರೊಂದಿಗೆ ಚರ್ಚೆ ನಡೆಸಿ ಸರಕಾರದ ವತಿಯಿಂದ ಆಚರಿಸುವ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಗುರುವಾರ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಾಪುರುಷರ ಜಯಂತಿಗಳು ಅರ್ಥಕಳೆದುಕೊಂಡು ಅವು ಕೇವಲ ಜಾತಿಗೆ ಸೀಮಿತವಾಗಿವೆ. ಆ ಹಿನ್ನೆಲೆಯಲ್ಲಿ ಮಾರ್ಚ್-ಎಪ್ರಿಲ್ ತಿಂಗಳ ಒಳಗೆ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರೊಂದಿಗೆ ಚರ್ಚೆ ನಡೆಸಿ ಸರಕಾರದ ವತಿಯಿಂದ ಆಚರಿಸುವ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸರ್ವಜ್ಞ ಸಹಿತ ಹಲವರ ಜಯಂತಿಗಳನ್ನು ಸಾಂಕೇತಿಕವಾಗಿ ಸರಕಾರವು ಆಚರಣೆ ಮಾಡುತ್ತಿರುವುದು ಬೇಸರವನ್ನುಂಟುಮಾಡಿದೆ. ಮನಸ್ಸಿಗೆ ವಿರುದ್ದವಾಗಿ ನಡೆದುಕೊಳ್ಳಲು ನಾನು ತಯಾರಿಲ್ಲ ಎಂದರು.