ಬೆಂಗಳೂರು, ಫೆ.21 (DaijiworldNews/PY): ವಿಧಾನಸೌಧಕ್ಕೆ ಮಾಧ್ಯಮಗಳಿಗೆ ಪ್ರವೇಶ ನೀಡಬಾರದು ಎಂದು ನಿರ್ಬಂಧಿಸಿದ ಬೆನ್ನಲ್ಲೇ ಶಾಸಕರ ಭವನಕ್ಕೂ ಪತ್ರಕರ್ತರಿಗೆ ಪ್ರವೇಶವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಸ್ಪೀಕರ್ ಆಗಿ ನೇಮಕಗೊಂಡ ಕೂಡಲೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸೌಧದಲ್ಲಿ ನಡೆಯುವ ಅಧಿವೇಶನವನ್ನು ಚಿತ್ರೀಕರಿಸಲು ಎಲ್ಲ ಮಾಧ್ಯಮಗಳಿಗೆ ನಿರ್ಬಂಧಿಸಿದ್ದು, ಈ ವಿಚಾರ ಸಾಕಷ್ಟು ಚರ್ಚೆಗಳಿಗೂ ಕಾರಣವಾಗಿತ್ತು.
ಶಾಸಕರು ಸದನದಲ್ಲಿ ಕುಳಿತು ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ನೋಡಿದ್ದ ದೃಶ್ಯಗಳನ್ನು ಚಾನೆಲ್ಗಳು ಹಾಗೂ ಪತ್ರಿಕೆಗಳು ವರದಿ ಮಾಡಿದ್ದವು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸಭಾ ಅಧಿವೇಶನವನ್ನು ಚಿತ್ರೀಕರಿಸಲು ಮಾಧ್ಯಮಗಳಿಗೆ ಪ್ರವೇಶ ನೀಡಲಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು.