ನವದೆಹಲಿ, ಫೆ.21 (DaijiworldNews/PY): ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಶಿಕ್ಷೆಯಿಂದ ಪಾರಾಗುವ ಸಲುವಾಗಿ ಪ್ರಯತ್ನಿಸುತ್ತಿದ್ದು ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶರ್ಮಾ ಪರ ವಾದಿಸುತ್ತಿರುವ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.
ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಸಂದರ್ಭದಲ್ಲಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಜ.30ರಂದು ವಿನಯ್ ಶರ್ಮಾನ ಕ್ಷಮಾದಾನ ಅರ್ಜಿ ದೆಹಲಿ ಸರ್ಕಾರಕ್ಕೆ ತಲುಪಿತ್ತು. ಆ ಸಂದರ್ಭ ಸರ್ಕಾರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿತ್ತು. ಫೆ.8ರಂದು ನಡೆಯುವ ಚುನಾವಣೆಗಾಗಿ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವಾಗ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿ ಗೃಹ ಸಚಿವರು ಅಥವಾ ಶಾಸಕರು ಆಗಿರುವುದಿಲ್ಲ ಎಂದು ಎ.ಪಿ. ಸಿಂಗ್ ಹೇಳಿರುವುದಾಗಿ ವರದಿ ಮಾಡಿದೆ.
ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲು ವಾಟ್ಸ್ಆ್ಯಪ್ ಮೂಲಕ ಸಿಸೋಡಿಯಾ ಕಳಿಸಿದ ಡಿಜಿಟಲ್ ಸಹಿಯನ್ನು ಬಳಸಲಾಗಿತ್ತು. ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗ ದೆಹಲಿಯ ಗೃಹ ಸಚಿವರು ಅಧಿಕಾರದಲ್ಲಿರಲಿಲ್ಲ. ಹೀಗಿದ್ದರೂ ಅವರು ಅದನ್ನು ರಾಷ್ಟ್ರಪತಿಯರಿಗೆ ಕಳುಹಿಸಿಕೊಟ್ಟರು. ಕ್ಷಮಾದಾನ ಅರ್ಜಿ ತಿರಸ್ಕರಿಸಬಾರದಿತ್ತು. ಈ ವಿಚಾರವಾಗಿ ಚುನಾವಣಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಚುನಾವಣಾ ಆಯೋಗ, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಹಾಗೂ ಗೃಹ ಸಚಿವಾಲಯದ ಘನತೆಯನ್ನು ಈ ರೀತಿಯಾಗಿ ಕಳೆಯಬಾರದು ಎಂದು ನಾನು ಬಯಸುತ್ತೇನೆ ಎಂದು ಸಿಂಗ್ ತಿಳಿಸಿದ್ದಾರೆ.
ನಿರ್ಭಯಾ ಅಪರಾಧಿಗಳಿಗೆ ಮಾರ್ಚ್ 3ರ ಬೆಳಿಗ್ಗೆ ಗಲ್ಲು ಶಿಕ್ಷೆ ಜಾರಿಗೆ ದೆಹಲಿ ಕೋರ್ಟ್ ಸೋಮವಾರ ತೀರ್ಪು ನೀಡಿದ ಬೆನ್ನಲ್ಲೇ ಅಪರಾಧಿ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡಿದ್ದ.