ಬೆಂಗಳೂರು, ಫೆ.21 (DaijiworldNews/PY): ಸಿಎಎ ವಿರೋಧಿ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಳ ಹಿನ್ನೆಲೆ ಬಗ್ಗೆ ತನಿಖೆ ನಡೆಯುತ್ತಿದೆ. ಸಭೆಯ ಆಯೋಜಕರೇ ಆಕೆಯನ್ನು ಕರೆಸಿದ್ದಾರಾ ಎಂದೂ ವಿಚಾರಿಸಲಾಗುತ್ತಿದೆ. ಆಯೋಜಕರಿಗೆ ಸಮನ್ಸ್ ನೀಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈಗಾಗಲೇ ಪೊಲೀಸರು ಅಮೂಲ್ಯ ವಿರುದ್ದ ಕ್ರಮಕೈಗೊಂಡಿದ್ದಾರೆ. ಮುಂದಿ ತನಿಖೆ ನಡೆಯುತ್ತಿದೆ. ನಿನ್ನೆ ನಡೆದ ಪ್ರಕರಣದಲ್ಲಿ ಸಂಘಟನೆಗಳ ಕೈವಾಡದ ವಿಚಾರದ ಬಗ್ಗೆ ಸಂಶಯವಿದೆ ಎಂದು ಹೇಳಿದರು.
ಯಾರಿಗೂ ಪೌರತ್ವ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ. ಸಿಎಎಯಿಂದ ತೊಂದರೆಯಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಈ ಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಪರೋಕ್ಷವಾಗಿ ಇದಕ್ಕೆಲ್ಲ ಬೆಂಬಲ ನೀಡಬಾರದು ಎಂದರು.
ಅಮೂಲ್ಯಾ ಈ ಹಿಂದೆ ನನ್ನ ಹಿಂದೆ ಸಾಕಷ್ಟು ಸಂಘಟನೆಗಳಿವೆ ಎಂಬ ವಿಚಾರವಾಗಿ ಸಂದರ್ಶನ ನೀಡಿರುವ ವಿಚಾರ ತಿಳಿದುಬಂದಿದೆ. ಅಮೂಲ್ಯಾಳ ಗಡಿಪಾರಿನ ವಿಚಾರವಾಗಿ ಯೋಚಿಸಿಲ್ಲ. ನಮ್ಮಲ್ಲೇ ಸಾಕಷ್ಟು ಕಾನೂನುಗಳಿವೆ. ಎಲ್ಲಾ ವಿಚಾರವಾಗಿ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು.