ಬಳ್ಳಾರಿ, ಫೆ.21 (DaijiworldNews/PY): "ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಗ್ಗೂಡಿ ಅಮೂಲ್ಯ ಸೇರಿದಂತೆ ದೇಶದ್ರೋಹಿ ಘೋಷಣೆ ಕೂಗುವವರನ್ನು ವಿಮಾನದಲ್ಲಿ ಹಾಕಿ ಕರಾಚಿಯಲ್ಲಿ ಬಿಟ್ಟು ಬರಬೇಕು. ಭಾರತ ಮಾತಾಕೀ ಜೈ ಎನ್ನುವವರೆಗೂ ಅವರನ್ನು ಅಲ್ಲಿಂದ ಬಿಡಬಾರದು" ಎಂದು ಬಳ್ಳಾರಿ ನಗರ ಶಾಸಕ ಬಿಜೆಪಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ಬಳ್ಳಾರಿಯ ಬಾಪೂಜಿ ನಗರದಲ್ಲಿ ಮಹಾಶಿವರಾತ್ರಿ ರಥೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಓವೈಸಿ ಸಂಘಟನೆಯವರು ಹಿಂದೂಗಳನ್ನು ಮುಗಿಸಲು ಹದಿನೈದು ನಿಮಿಷ ಕೊಡಿ ಎನ್ನುತ್ತಾರೆ. ಆ ಹದಿನೈದು ನಿಮಿಷ ಕೂಡ ನಮಗೆ ಬೇಡ. ಕೇವಲ ಐದೇ ನಿಮಿಷ ಸಾಕು" ಎಂದರು.
"ಈ ದೇಶದಲ್ಲಿ ದೇಶದ್ರೋಹಿಗಳು ಇರಬಾರದು, ದೇಶಪ್ರೇಮಿಗಳು ಇರಬೇಕು. ಅಮೂಲ್ಯ ಅವರಿಗೆ ದೇಶದ್ರೋಹಿಗಳು ಪ್ರಚೋದನೆ ನೀಡುತ್ತಿದ್ದಾರೆ. ಹಾಗಾಗಿ ದೇಶದ್ರೋಹಿ ಘೋಷಣೆ ಕೂಗುತ್ತಿದ್ದಾರೆ" ಎಂದು ಹೇಳಿದರು.
ಫೆ.20 ಗುರುವಾರದಂದು ಬೆಂಗಳೂರಿನಲ್ಲಿ ಸಿಎಎ ವಿರೋಧಿ ಹೋರಾಟದಲ್ಲಿ ಅಮೂಲ್ಯ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಳು. ಈಕೆಯ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.