ಬೆಂಗಳೂರು, ಫೆ 22 (Daijiworld News/MB) : ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ (19) ದೇಶ ದ್ರೋಹ ಆರೋಪದಲ್ಲಿ ಬಂಧನವಾದ ಬೆನ್ನಲ್ಲೇ ಕಾಶ್ಮೀರ ಮುಕ್ತಿ ಭಿತ್ತಿಪತ್ರ ಪ್ರದರ್ಶಿಸಿದ ಅನ್ನಪೂರ್ಣ ಅಲಿಯಾಸ್ ಆರ್ದ್ರಾ (24) ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಪುರಭವನ ಮುಂಭಾಗದಲ್ಲಿ ಅಮೂಲ್ಯಾ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಆಯೋಜಿಸಿತ್ತು. ಅಲ್ಲಿಗೆ ಬಂದಿದ್ದ ಆರ್ದ್ರಾ "ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್, ಆದಿವಾಸಿ ಮುಕ್ತಿ ಮುಕ್ತಿ ಮುಕ್ತಿ" ಎಂದು ಬರೆದಿದ್ದ ಭಿತ್ತಿಪತ್ರ ಪ್ರದರ್ಶನ ಮಾಡಿದ್ದರು. ಇದನ್ನು ಗಮನಿಸಿದ ಪ್ರತಿಭಟನಕಾರರು ಯುವತಿಯನ್ನು ಪ್ರಶ್ನಿಸಿದ್ದು ಈ ವಿಷಯದಲ್ಲಿ ಮಾತುಕತೆ ನಡೆದಿದೆ.
ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಯುವತಿಯನ್ನು ಬಂಧನ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ. ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶುಕ್ರವಾರ ಸಂಜೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು, ಯುವತಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.
ಹಾಗೆಯೇ ಈ ತನಿಖೆ ಸಂದರ್ಭದಲ್ಲಿ ಅಮೂಲ್ಯಾ, ಆರ್ದ್ರಾ ಸ್ನೇಹಿತೆಯರು ಎಂಬುದು ತಿಳಿದು ಬಂದಿರುವುದಾಗಿ ವರದಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ಗೌಡ, "ಯುವತಿ ಭಿತ್ತಿಪತ್ರವನ್ನಷ್ಟೇ ಪ್ರದರ್ಶಿಸಲಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಕೂಗಿದ್ದಾರೆ. ದೂರು ನೀಡಿದ್ದೇವೆ" ಎಂದರು.
ಕೇಂದ್ರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ಅವರು, "ಯುವತಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ಯುವತಿ ಕೈಯಲ್ಲಿದ್ದ ಭಿತ್ತಿಪತ್ರ ಜಪ್ತಿ ಮಾಡಿದ್ದೇವೆ. ದೂರು ದಾಖಲು ಮಾಡಿದ್ದೇವೆ" ಎಂದು ಹೇಳಿದರು.
ಆರ್ದ್ರಾ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ಆಕೆಯ ಪೋಷಕರು ಸದ್ಯ ಮಲ್ಲೇಶ್ವರದಲ್ಲಿ ನೆಲೆಸಿದ್ದಾರೆ. ಕಂಪೆನಿಯ ಕಚೇರಿ ದೂರವಾಗುತ್ತದೆ ಎಂಬ ಹಿನ್ನಲೆಯಲ್ಲಿ ಸಿ.ವಿ. ರಾಮನ್ ನಗರದ ಪಿ.ಜಿಯಲ್ಲಿ (ಪೇಯಿಂಗ್ ಗೆಸ್ಟ್) ಆರ್ದ್ರಾ ಉಳಿದುಕೊಂಡಿದ್ದರು. ಮನೆಗೆ ಆಗಾಗ ತೆರಳುತ್ತಿದ್ದರು" ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನ ಆರ್ದ್ರಾ ಮನೆ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದು ಸ್ಥಳಕ್ಕೆ ಆಗಮಿಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಪ್ರಸ್ತುತ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.