ಶ್ರೀನಗರ, ಫೆ 22 (Daijiworld News/MB) : ಭದ್ರತಾ ಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆ ಜಮ್ಮು–ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಸಂಗಮ್ ಎಂಬಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.
ಉಗ್ರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಶುಕ್ರವಾರ ತಡರಾತ್ರಿಯಿಂದಲೇ ಗುಂಡಿನ ಚಕಮಕಿ ಆರಂಭವಾಗಿದೆ.
ಮೃತ ಉಗ್ರರನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸದಸ್ಯರು ಎಂದು ಗುರುತಿಸಲಾಗಿದ್ದು ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಮ್ಮು–ಕಾಶ್ಮೀರ ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ (ಸಿಆರ್ಪಿಎಫ್) ಮತ್ತು ಯೋಧರು ಭಾಗಿಯಾಗಿದ್ದಾರೆ.
ಭದ್ರತಾ ಪಡೆಗಳು ಎರಡು ದಿನಗಳ ಹಿಂದಷ್ಟೇ ಹಿಜಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದವು.