ನವದೆಹಲಿ, ಫೆ 22 (Daijiworld News/MB) : ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಸುದ್ದಿಯನ್ನು ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ವಿಡಿಯೋ ಸಮೇತ ಪ್ರಕಟ ಮಾಡಲಾಗಿದೆ.
ಮಾಧ್ಯಮಗಳಲ್ಲಿ ಮೊದಲು ಎರಡರಿಂದ ಮೂರು ಬಾರಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಅಮೂಲ್ಯ ಲಿಯೋನಾ, ಮೈಕ್ ಕಿತ್ತುಕೊಳ್ಳುವ ವೇಳೆಗೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ ಎಂದು ವರದಿಯಾಗಿದೆ.
ಹಾಗೆಯೇ ಪಾಕಿಸ್ತಾನ್ ಮಾಧ್ಯಮಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಿವಪುರ ಗ್ರಾಮದಲ್ಲಿ ಇರುವ ಅಮೂಲ್ಯ ಲಿಯೋನಾ ತಂದೆ ವಾಜಿ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಬಗ್ಗೆಯೂ ವರದಿಯಾಗಿದೆ.
ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರೆಂಟ್ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಆಯೋಜಿಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅಮೂಲ್ಯ ಲಿಯೋನಾ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಳು. ಆ ಕೂಡಲೇ ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅವಳ ಕೈಯಿಂದ ಮೈಕ್ ಕಿತ್ತು ಕೊಂಡಿದ್ದು ಪೊಲೀಸರು ಆಕೆಯನ್ನು ಬಂಧನ ಮಾಡಿದ್ದಾರೆ.