ನವದೆಹಲಿ, ಫೆ 22 (Daijiworld News/MB) : ಪ್ಯಾಕೇಜಿನಲ್ಲಿ ವಿದೇಶ ಪ್ರವಾಸ ಹೋಗುವವರಿಗೆ ಐಟಿ ಶಾಕ್ ನೀಡಿದ್ದು ಏಪ್ರಿಲ್ 1ರಿಂದ ಯಾರೇ ವಿದೇಶಕ್ಕೆ ಪ್ಯಾಕೇಜ್ ಟೂರ್ ಹೋದರೂ ಟಿಸಿಎಸ್(ಟ್ಯಾಕ್ಸ್ ಕಲೆಕ್ಷನ್ ಅಟ್ ಸೋರ್ಸ್) ತೆರಬೇಕಾಗಿದೆ.
ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಏಳು ಲಕ್ಷ ರೂ. ವರೆಗೆ ವೆಚ್ಚ ಮಾಡಿ ಪ್ರವಾಸಕ್ಕೆ ತೆರಳುವವರು , ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಶೇ.5, ಇಲ್ಲದಿದ್ದಲ್ಲಿ ಶೇ.10 ರಷ್ಟು ಟಿಸಿಎಸ್ ಪಾವತಿಸಬೇಕು ಎಂದು ತಿಳಿಸಿದ್ದರು.
ಈ ಟಿಸಿಎಸ್ನ್ನು ಪ್ಯಾಕೇಜ್ ಟೂರ್ ಆಯೋಜಿಸುವಾತ ಸಂಗ್ರಹ ಮಾಡಬೇಕೆಂದು ಬಜೆಟ್ನಲ್ಲಿದ್ದು ತೆರಿಗೆ ಸಲಹೆಗಾರರು ಇದನ್ನು ಪತ್ತೆ ಮಾಡಿದ್ದಾರೆ.
ಹಲವಾರು ಮಂದಿ ತೆರಿಗೆ ಹಣವನ್ನು ಕಟ್ಟುವುದಿಲ್ಲ. ತೆರಿಗೆ ತೆರುವಷ್ಟು ಆದಾಯವಿಲ್ಲವೆಂದು ಹೇಳುತ್ತಾರೆ. ಆದರೆ ಪ್ಯಾಕೇಜ್ ಮೂಲಕ ವಿದೇಶ ಪ್ರವಾಸ ಮಾಡುತ್ತಾರೆ. ಇನ್ನು ಮುಂದೆ ಬೇರೆಯವರ ಹಣದಲ್ಲಿ ಪ್ರವಾಸ ಹೋಗುವ ಸರ್ಕಾರಿ ಅಧಿಕಾರಿಗಳು , ಕಂಪನಿಗಳ ಮುಖ್ಯಸ್ಥರು , ವೈದ್ಯರ ವಿವರ ಸರ್ಕಾರಕ್ಕೆ ಲಭ್ಯವಾಗಲಿದೆ.
ಇದರಲ್ಲಿ ರೀಫಂಡ್ ಆಯ್ಕೆ ಇದ್ದು ಐದು ಲಕ್ಷ ರೂ. ಒಳಗೆ ಆದಾಯ ಇರುವವರು ವಿದೇಶಕ್ಕೆ ಪ್ಯಾಕೇಜ್ ಪ್ರವಾಸಕ್ಕೆ ತೆರಳುವಾಗ ಟಿಸಿಎಸ್ ಪಾವತಿಸಿದರೆ, ಅದನ್ನು ರೀಫಂಡ್ ಪಡೆಯಬಹುದಾಗಿದೆ. ಟಿಸಿಎಸ್ ಸಂಗ್ರಹ ಮಾಡುವುದರಿಂದ ವಿದೇಶ ಪ್ರವಾಸಕ್ಕೆ ತೆರಳಿದವರ ನೈಜ ಆದಾಯದ ಮಾಹಿತಿ ತೆರಿಗೆ ಅಧಿಕಾರಿಗಳಿಗೆ ಸುಲಭವಾಗಿ ದೊರೆಯಲಿದೆ.