ಬೆಂಗಳೂರು, ಫೆ 22 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಅಮೂಲ್ಯ ಲಿಯೋನಾ ಬಂಧನದ ಬಳಿಕ ಪಾಕಿಸ್ತಾನದ ಪರವಾಗಿರುವುದು ಆಕೆಯ ಮುಖ್ಯ ಉದ್ದೇಶ ಅಲ್ಲ ಎಂದು ಹೇಳಿದ್ದಾಳೆ. ಹಾಗೆಯೇ ಆಕೆಗೆ ಮಾತನ್ನು ಮುಗಿಸಲು ಅವಕಾಶ ನೀಡಿದ್ದಲ್ಲಿ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾಳೆ.
ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಈ ಕುರಿತಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದು "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಾರೆ. ಆದರೆ ಪ್ರತಿಭಟನೆಯಲ್ಲಿ ಎಲ್ಲಾ ಜನರು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಅಲ್ಲಿರುವವರು ಭಾರತದ ಪರವಾಗೇ ಮಾತನಾಡುತ್ತಾರೆ. ನಾನು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗ ಯಾರೂ ಕೂಡಾ ಅದಕ್ಕೆ ಜಿಂದಾಬಾದ್ ಎಂದು ಕೂಗಲಿಲ್ಲ. ಯಾವಾಗ ಪ್ರತಿಭಟನ ನಿರತರು ಅದಕ್ಕೆ ಪ್ರತಿಯಾಗಿ ಘೋಷಣೆ ಕೂಗಿಲಿಲ್ಲವೋ ಅದು ಅವರ ದೇಶ ಭಕ್ತಿಯನ್ನು ತೋರಿಸುತ್ತದೆ. ನಾನು ಆ ಬಳಿಕ ನಾವೆಲ್ಲರೂ ಭಾರತೀಯರು ಎಂದು ಹೇಳಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲು ನಿರ್ಧಾರ ಮಾಡಿದ್ದೆ. ಆದರೆ ನಾನು ಒಂದು ಬಾರಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗ ನನ್ನ ಕೈಯಿಂದ ಮೈಕ್ನ್ನು ಕಿತ್ತುಕೊಂಡರು. ನಾನು ನನ್ನ ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಕೋರಿಕೊಂಡೆ ಆದರೆ ಯಾರೂ ಕೂಡಾ ನನ್ನ ಮಾತನ್ನು ಕೇಳಲಿಲ್ಲ" ಎಂದು ಹೇಳಿದ್ದಾಳೆ.
ಅಧಿಕಾರಿಗಳು ಆಕೆಯ ಕೈಯಲ್ಲಿದ್ದ ಮೈಕ್ನ್ನು ಕಿತ್ತುಕೊಂಡ ಬಳಿಕ ಆಕೆ ಮೂರು ಬಾರಿ ಪಾಕಿಸ್ತಾನ ಜಿಂದಾಬಾದ್ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ ಎಂದು ಹೇಳಿದ್ದಾರೆ.
ಅಮೂಲ್ಯ ಲಿಯೋನಾ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ಬೆನ್ನಲ್ಲೇ ಕಾರ್ಯಕ್ರಮ ಆಯೋಜಕರು ಹಾಗೂ ಅಸ್ಸಾದುದ್ದೀನ್ ಓವೈಸಿಯವರು ಆಕೆಯನ್ನು ಅಲ್ಲಿಂದ ಹೊರದಬ್ಬಿದ್ದಾರೆ.
ಪ್ರಸ್ತುತ ಅಮೂಲ್ಯ ಲಿಯೋನಾಳನ್ನು ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ. ಹಾಗೆಯೇ ಈ ಕಾರ್ಯಕ್ರಮ ಆಯೋಜಕರು ಹಾಗೂ ಅಲ್ಲಿ ಉಪಸ್ಥಿತರಿದ್ದವರನ್ನು ವಿಚಾರಣೆ ಮಾಡಲಾಗಿದೆ.
ಅಧಿಕಾರಿಗಳು ಆಕೆ ಎಡಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ ಎಂದು ತಿಳಿಸಿದ್ದಾರೆ.
ಅಮೂಲ್ಯ ಲಿಯೋನಾಳ ಈ ಘೋಷಣೆ ಬಗ್ಗೆ ಎಡ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಖಂಡನೆ ವ್ಯಕ್ತಪಡಿಸಿದೆ.